ದಾವಣಗೆರೆ, ಡಿ. 20- ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ, ಅವರನ್ನು ಬಂಧಸಿರುವುದು ಹಾಗೂ ಅವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನ ನಡೆಸಿರುವುದು ಅನಾಗರಿಕ ವರ್ತನೆ. ಇದೊಂದು ರೌಡಿಸಂ ಕೃತ್ಯ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.
ನಗರದ ಬಿಜೆಪಿ ಕಚೇರಿಯಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ, ಸರ್ಕಾರದ ನಡೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ಉಪ ವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಡಾ.ಅಂಬೇಡ್ಕರ್ ಅವರನ್ನು ಗೌರವಿಸಿದ್ದು ನಮ್ಮ ಪಕ್ಷ. ಆದರೆ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದ ಕಾಂಗ್ರೆಸ್, ಅಂಬೇಡ್ಕರ್ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದವರನ್ನು ಇಷ್ಟು ಶೀಘ್ರ ಬಂಧಿಸಲಿಲ್ಲ. ಭಯೋತ್ಪಾದಕರನ್ನು ರಕ್ಷಿಸುವ ಕಾಂಗ್ರೆಸ್ ದೇಶದಿಂದ ತೊಲಗಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ಮಾತನಾಡಿ, ರವಿಯವರ ಮೇಲೆ ಆರೋಪ ಬಂದಾಕ್ಷಣ ಅವರನ್ನು ಬಂಧಿಸಲಾಗಿದೆ. ಆದರೆ ಅಂದು ಪಾಕ್ ಪರ ಘೋಷಣೆ ಕೂಗಿದವರನ್ನು ತಿಂಗಳಾದರೂ ಬಂಧಿಸಿರಲಿಲ್ಲ. ಇದು ಕಾಂಗ್ರೆಸ್‌ನ ಇಬ್ಬಗೆಯ ನೀತಿಯಲ್ಲವೇ? ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಸಿ.ಟಿ. ರವಿ ಅವರ ಹೇಳಿಕೆ ಖಂಡಿಸುವುದಾಗಿ ಹೇಳಿದ್ದಾರೆ. ಆದರೆ ಅವರ ಪಕ್ಷದ ಮುಖಂಡ ರಾಹುಲ್ ಗಾಂಧಿ ದಲಿತ ಸಂಸದೆಯವರ ಮೇಲೆ ಅನುಚಿತವಾಗಿ ವರ್ತಿಸಿದ್ದಾರೆ. ಅದನ್ನೇಕೆ ಖಂಡಿಸುವುದಿಲ್ಲ ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಮೃತಪಟ್ಟಾಗ ಶವ ಸಂಸ್ಕಾರಕ್ಕೂ ಜಾಗ ಕೊಡದ ಕಾಂಗ್ರೆಸ್ ಪಕ್ಷದವರು ಕೇವಲ ವೋಟ್ ಬ್ಯಾಂಕ್‌ಗಾಗಿ ಅವರನ್ನು ಬಳಸಿಕೊಳ್ಳುವುದನ್ನು ಕೈ ಬಿಡಬೇಕು ಎಂದರು.
ವಿಧಾನಸೌಧದಲ್ಲಿ ಅಕ್ರಮವಾಗಿ ಪ್ರವೇಶಿಸಿ, ಸಿ.ಟಿ.ರವಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಮತ್ತವರ ಚೇಲಾಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಿ.ಟಿ.ರವಿಯವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 75ರಡಿ ಲೈಂಗಿಕ ಕಿರುಕುಳ ಮತ್ತು ಕಲಂ 79ರಡಿ ಮಹಿಳೆಯರ ಮಾನಕ್ಕೆ ಕುಂದು ತರುವಂತಹ ಪದ ಬಳಕೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿರುವುದನ್ನು ರದ್ದುಪಡಿಸಬೇಕು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಮಾಜಿ ಶಾಸಕ ಬಸವರಾಜ ನಾಯ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೇಬಾಳ್, ಅಣ್ಣೇಶ್ ಐರಣಿ, ನಿಕಟಪೂರ್ವ ಅಧ್ಯಕ್ಷ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹಾಗೂ ಕಾರ್ಯಕರ್ತರುಗಳು ಪ್ರತಿಭಟನೆಯಲ್ಲಿದ್ದರು.