ಹರಿಹರ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್
ಹರಿಹರ, ಡಿ.17- ಮಹಿಳೆಯರು ಶಿಕ್ಷಣ ಹೊಂದಿ ದರೆ, ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳು ಬರದಂತೆ ಜೀವನವನ್ನು ಸದೃಢವಾಗಿ ನಡೆಸಿಕೊಂಡು ಹೋಗಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮತ್ತು ಸಮನ್ವಯ ಟ್ರಸ್ಟ್ ಸಂಯುಕ್ತವಾಗಿ ಇಂದು ಆಯೋಜಿ ಸಿದ್ದ ಮಹಿಳೆಯರ ಕುಂದು ಕೊರತೆ ಹಾಗೂ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಮನೆಯಲ್ಲಿ ಮಹಿಳೆಯರ ಜನನವಾದರೆ ಕಷ್ಟಗಳು ಉದ್ಭವವಾಗುತ್ತವೆ ಎಂದು ಭಾವಿಸುವಂತಹ ಕಾಲಘಟ್ಟ ಇತ್ತು. ಆದರೆ, ಇತ್ತೀಚೆಗೆ ದೇಶವು ಪ್ರತಿಯೊಂದು ಹಂತದಲ್ಲಿ ಪ್ರಗತಿಯ ಹಾದಿಯಲ್ಲಿ ಸಾಗುತ್ತಿರುವ ಕಾರಣದಿಂದಾಗಿ, ಮಹಿಳೆಯರು ಎಲ್ಲಾ ರಂಗಳದಲ್ಲಿ ತಮ್ಮದೇ ಆದಂತಹ ಪ್ರತಿಭೆಯನ್ನು ಪ್ರದರ್ಶಿಸಿಸುವ ಮೂಲಕ ಸಮಾಜದಲ್ಲಿ ಉನ್ನತ ಮಟ್ಟದಲ್ಲಿ ಪ್ರಗತಿಯನ್ನು ಸಾಧಿಸುತ್ತಾ ಸಾಗಿರುವುದರಿಂದ ಮಹಿಳೆಯರ ಬಗ್ಗೆ ಇದ್ದಂತಹ ತಾತ್ಸಾರ ಮನೋಭಾವ ತನ್ನಿಂದ ತಾನೇ ಕಡಿಮೆ ಆಗುತ್ತಾ ಸಾಗಿದೆ. ಇದಕ್ಕೆ ಕಾರಣ ಮಹಿಳೆಯರಿಗೆ ಪೋಷಕರು ನೀಡುತ್ತಿರುವ ವಿದ್ಯಾಭ್ಯಾಸ ಕಾರಣವಾಗಿದೆ. ಮಹಿಳೆಯರು ಶಿಕ್ಷಣ ಪಡೆದರೆ ಜೀವನವನ್ನು ಸದೃಢ ರೀತಿಯಲ್ಲಿ ನಡೆಸಿಕೊಂಡು ಹೋಗುವುದಕ್ಕೆ ಸಹಕಾರಿಯಾಗುತ್ತದೆ ಎಂದು ಪ್ರತಿಪಾದಿಸಿದರು.
ದೇಶದೆಲ್ಲೆಡೆ ತಂತ್ರಜ್ಞಾನ ಹಾಗೂ ಸಾಮಾಜಿಕ ಜಾಲತಾಣ ಹೆಚ್ಚು ಆದಂತೆ ಸೈಬರ್ ಕ್ರೈಂಗಳು ಹೆಚ್ಚಾಗುತ್ತಿದ್ದು, ಶಿಕ್ಷಣ ವಂಚಿತ ಮಹಿಳೆಯರೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಮಹಿಳೆಯರು ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವಾಗ ಬಹಳಷ್ಟು ಎಚ್ಚರಿಕೆಯಿಂದ ಇರುವಂತೆ ಮತ್ತು ನಿಮಗೆ ಸಮಸ್ಯೆಗಳು ಎದುರಾದರೆ ಪೊಲೀಸ್ ಇಲಾಖೆಯ 112 ವಾಹನಕ್ಕೆ ಕರೆ ಮಾಡಿದಾಗ ತಕ್ಷಣವೇ ನಿಮ್ಮ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರ ಮಹಿಳೆಯರಿಗೆ ಆತ್ಮಸ್ಥೈರ್ಯ ನೀಡುವ ಉದ್ದೇಶದಿಂದ ಮಹಿಳೆಯರಿಗೆ ಜಾಗೃತಿ ಕಾರ್ಯಕ್ರಮವು ಪ್ರತಿ ವರ್ಷ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ, ಅಪರಾಧ ತಡೆ ಮಾಸಾಚರಣೆ ಹೆಸರಿನಲ್ಲಿ ಒಂದು ತಿಂಗಳ ಕಾಲ ಆಯೋಜಿಸಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಕಾನೂನಿನ ಅರಿವಿಲ್ಲದ ಮಹಿಳೆಯರ ರಕ್ಷಣೆಗೆ ಮತ್ತು ಅವರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಮಹಿಳೆಯರು ತಮಗೆ ಕಿರುಕುಳ ದೌರ್ಜನ್ಯ ನಡೆದಾಗ ಕೂಡಲೇ ನಿಮ್ಮ ಹತ್ತಿರದ ಯಾವುದೇ ಪೋಲಿಸ್ ಠಾಣೆಗೆ ಧಾವಿಸಿ ದೂರನ್ನು ದಾಖಲಿಸಬಹುದಾಗಿದೆ. ಜನಸ್ನೇಹಿ ಯಾದ ಪೊಲೀಸ್ ಠಾಣೆಗಳು ನಿಮಗೆ ನ್ಯಾಯವನ್ನು ಒದಗಿಸುವುದಕ್ಕಾಗಿ 24 ಗಂಟೆಗಳು ನಿಮಗಾಗಿ ತೆರೆದಿರುತ್ತದೆ ಎಂದು ಹೇಳಿದರು.
ವಿಜಯಲಕ್ಷ್ಮಿ ಮಾತನಾಡಿ, ಹಿಂದಿನ ದಿನಗಳಲ್ಲಿ ಕೂಡು ಕುಟುಂಬಗಳಿದ್ದವು. ಆದರೆ ಇಂದಿನ ದಿನಗಳಲ್ಲಿ ಒಂಟಿ ಕುಟುಂಬಗಳ ಸಂಖ್ಯೆ ಹೆಚ್ಚಾಗಿ, ಚಿಕ್ಕಪುಟ್ಟ ಸಮಸ್ಯೆಗಳೇ ನ್ಯಾಯಾಲಯದ ತನಕ ಹೋಗುತ್ತಿವೆ. ಇದರ ಬಗ್ಗೆ ಮಹಿಳೆಯರು ಜಾಗೃತಿ ವಹಿಸಬೇಕು. ಮಹಿಳೆ ಸಾಧನೆ ಮಾಡಲು ಮನಸ್ಸು ಮಾಡಿದರೆ ಸಾಕಷ್ಟು ಸಾಧನೆ ಮಾಡಬಲ್ಲರು, ರಾಜ್ಯದಲ್ಲಿ ಕೃಷಿ ಆಧಾರಿತ ಮಹಿಳೆಯರೇ ಹೆಚ್ಚಾಗಿರುವುದು ಕಾಣಬಹುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಾನಾಯ್ಕ, ಹರಿಹರ ವೃತ್ತ ನಿರೀಕ್ಷಕ ಎಸ್.ದೇವಾನಂದ್, ಸಮನ್ವಯ ಟ್ರಸ್ಟ್ ನ ಸುಮಂಗಲ, ಪ್ರಗತಿಪರ ರೈತ ವೀರೇಶ್ ಸಜ್ಜನ, ನಬಾರ್ಡ್‌ನ ರಶ್ಮಿ, ಸಿಡಿಪಿಓ ಪೂರ್ಣಿಮಾ, ಪ್ರಮೀಳಾ ಇತರರು ಹಾಜರಿದ್ದರು.