`ಸ್ವರಾಂಜಲಿ’ಯ ಸ್ವರ ಲೋಕದಲ್ಲಿ ಮಿಂದೆದ್ದ ದೇವನಗರಿ ಸಂಗೀತಾಸಕ್ತರು
ದಾವಣಗೆರೆ, ಡಿ. 15- ‘ತೊರೆದು ಜೀವಿಸ ಬಹುದೇ ಹರಿನಿನ್ನ ಚರಣಗಳ…’ ಎನ್ನುತ್ತಿದ್ದಾಗ ನೆರೆದಿದ್ದ ಶ್ರೋತ್ರುಗಳು ಭಕ್ತಿ ಪರವಶವಾದರು. ‘ಆದಿಕೇಶವರಾಯ…’ ಎಂಬ ಏರುಗತಿಗೆ ಪ್ರೇಕ್ಷಕರು ಧನ್ಯರಾದರು.
ಹೌದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರ ಗಾನ ಸುಧೆಗೆ ಕೇಳುಗರು ಅಕ್ಷರಷಃ ತಲೆದೂಗಿದರು.
ಪ್ರತಿಮಾ ಸಭಾ, ದಾವಣಗೆರೆ ಮತ್ತು ಸ್ವರಮಯಿ, ಪುಣೆ ಸಹಯೋಗದಲ್ಲಿ ನಗರದ ಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಸಾಂಸ್ಕೃತಿಕ ಚೇತನ-ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹಾಗೂ ಸ್ವರಯೋಗಿನಿ ಡಾ.ಪ್ರಭಾ ಅತ್ರೆ ಸ್ಮರಣಾರ್ಥ ಸ್ವರಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಗಸದಲ್ಲಿ ನೇಸರ ಮರೆಯಾಗುತ್ತಲೇ ಚುಮು ಚುಮು ಚಳಿ ಆರಂಭವಾಗಿತ್ತು. ಆದರೆ ಸ್ವರಾಂಜಲಿ ನಡೆಯುತ್ತಿದ್ದ ಸಭಾಂಗಣದಲ್ಲಿ ಸಂಗೀತ ಅಲೆ ಅಲೆಯಾಗಿ ಹರಿಯುವಂತಿತ್ತು.
ಆರಂಭದಲ್ಲಿ ದುರ್ಗಾ ರಾಗದಿಂದ ಶಾಸ್ತ್ರೀಯ ಸಂಗೀತದ ರಸದೌತಣ ಉಣಬಡಿಸಿದ ವೆಂಕಟೇಶ ಕುಮಾರ್ ಅವರು, ‘ಅಕ್ಕಾ ಕೇಳವ್ವಾ ನಾ ಕನಸೊಂದ ಕಂಡೆ, ಅಕ್ಕಿ ಅಡಿಕೆ ಎಲೆ ತೆಂಗಿನಕಾಯಿ’ ಎಂದು ಅಕ್ಕಮಹಾದೇವಿ ವಚನಗಳನ್ನು ಹಾಡಿದರು.
ಶ್ರೋತೃಗಳ ಒತ್ತಾಯದ ಮೇರೆಗೆ ‘ತೊರೆದು ಜೀವಿಸ ಬಹುದೇ ಹರಿನಿನ್ನ ಚರಣಗಳ…’ ಹೇಳಿ ದಾಸಭಕ್ತಿಯನ್ನೇ ಉಕ್ಕೇರಿಸಿದರು. ಕರತಾಡನದ ಅಲೆಯೂ ಉಕ್ಕಿ ಬಂತು. ಕೊನೆಯಲ್ಲಿ ಭೈರವಿ ರಾಗದಲ್ಲಿ ಶರಣ ಸಕಲೋದ್ದಾರಕ ಜಾನಕೀ ರಮಣ ಎಂದು ಹಾಡುತ್ತಾ ತೆರೆ ಎಳೆದರು.
ಇದಕ್ಕೂ ಮುನ್ನ ಆರಂಭದಲ್ಲಿ ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಪ್ರೊ.ಬಸಮ್ಮನವರ ಸುಪುತ್ರ ಪೃಥುವೈನ್ಯ ಸಹ ಎಲ್ಲರೂ ಹುಬ್ಬೇರಿಸುವಂತೆ ಗಾನ ಸುಧೆ ಹರಿಸಿದರು. ಡಾ.ಪ್ರಭಾ ಅತ್ರೆ ಅವರ ಶಿಷ್ಯರೂ, ರಾಜಸ್ಥಾನ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರೂ ಆದ ಡಾ.ಚೇತನಾ ಪಾಠಕ್ ಸಹ ಸಂಗೀತ ರಸದೌತಣ ಉಣ ಬಡಿಸಿದರು.
ಕೇಶವ ಜೋಷಿ, ಸಂತೋಷ್ ಹೂಗಾರ, ಗುರುಪ್ರಸಾದ ಹೆಗಡೆ, ಶ್ರೀಶೈಲ ಬಿರಾದಾರ ಅವರುಗಳು ಹಾರ್ಮೋನಿಯಂ, ತಬಲ ಸಾಥ್ ನೀಡಿದರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂ.ವೆಂಕಟೇಶ್ ಕುಮಾರ್, 14-15 ವರ್ಷದವನಿದ್ದಾಗಿನಿಂದಲೂ ದಾವಣಗೆರೆ ಸಂಪರ್ಕದಲ್ಲಿದ್ದೇನೆ. ಇದು ಸಂಸ್ಕೃತಿ, ಸಭ್ಯತೆ, ದಾನಿಗಳಿಗೆ ನಂಬರ್ ಒಂದನೇ ಸ್ಥಾನದ ಊರು. ಇಲ್ಲಿ ಪ್ರಾಮಾಣಿಕರು, ನಿಸ್ವಾರ್ಥರು ಸೇವೆ ಮಾಡುತ್ತಿದ್ದಾರೆ ಎಂದರು.
ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳ ಮೇಲೆ ಹೆಚ್ಚು ಭಕ್ತಿ ಇರುವ ಈ ಊರಿನಲ್ಲಿ ಹಿಂದೂಸ್ತಾನಿ ವಾದನ, ಗಾಯನ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಾಗಿ ನಡೆಯಲಿ ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್. ಹಾಲಪ್ಪ, ಭೀಮಸೇನ ಜೋಷಿ ಅವರ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ವೆಂಕಟೇಶ್ ಕುಮಾರ್ ಅವರ ಮೇಲಿದೆ. ಅವರು ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಅಧ್ಯಕ್ಷ ಬಾ.ಮ. ಬಸವರಾಜಯ್ಯ ಪ್ರತಿಮಾ ಸಭಾ ನಡೆದು ಬಂದ ಹಾದಿ ಬಗ್ಗೆ ವಿವರಿಸಿದರು. ಸಂಗೀತ, ನಾಟಕ, ಸಾಹಿತ್ಯ, ಭಾಷೆಯ ಕುರಿತಂತೆ ಪ್ರತಿ ವರ್ಷ ಆರು ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ಕೋಶಾಧ್ಯಕ್ಷ ಸಂಪನ್ನ ಮುತಾಲಿಕ್ ಸ್ವಾಗತಿಸಿದರು. ದಿ.ಎಂ.ಜಿ. ಈಶ್ವರಪ್ಪ ಅವರ ಪತ್ನಿ ಪ್ರೊ.ಬಸಮ್ಮ, ಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಲ್ಲೇಶ್ ಉಪಸ್ಥಿತರಿದ್ದರು.
ಆರಂಭದಲ್ಲಿ ದಿ.ಎಂ.ಜಿ. ಈಶ್ವರಪ್ಪ ಹಾಗೂ ಡಾ.ಪ್ರಭಾ ಅತ್ರೆ ಅವರ ಅವರ ಕಿರು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಈಶ್ವರಪ್ಪ ಅವರ ಸಾಕ್ಷ್ಯಚಿತ್ರಕ್ಕೆ ಕಲಾವಿದ ಆರ್.ಟಿ. ಅರುಣ್ ಕುಮಾರ್ ಅವರ ಪರಿಕಲ್ಪನೆ, ಸಂಕಲನ, ನಾಗರಾಜ ಸಿರಿಗೆರೆ ಸಾಹಿತ್ಯ, ಉಮಾಶಂಕರ್ ಕುರುಡಿ ಅವರ ಛಾಯಾಗ್ರಹಣ ವಿತ್ತು. ಡಾ.ಶೃತಿರಾಜ್ ಹಿನ್ನೆಲೆ ಧ್ವನಿ ನೀಡಿದ್ದರು.