ಫೆ.27ರಂದು ದಾವಣಗೆರೆಯಲ್ಲಿ ಅದ್ಧೂರಿ ಜನ್ಮದಿನ,ರಾಷ್ಟ್ರೀಯ ನಾಯಕರಿಗೆ ಆಹ್ವಾನ
ವಿಜಯೇಂದ್ರ ಬಣದ 55ಕ್ಕೂ ಹೆಚ್ಚು ಮಾಜಿ ಸಚಿವರ, ಶಾಸಕರ ಸಭೆಯಲ್ಲಿ ನಿರ್ಣಯ
ದಾವಣಗೆರೆ, ಡಿ.15- ಬರುವ ಫೆಬ್ರವರಿ 27 ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮ ದಿನವನ್ನು ವಿಜೃಂಭಣೆಯಿಂದ ಆಚರಿಸಲು ಬಿಜೆಪಿಯ ಹಿರಿಯ ಮುಖಂಡರು ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ.
ಮಾಜಿ ಸಚಿವರುಗಳಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯನಾಯ್ಡು ನೇತೃತ್ವದಲ್ಲಿ ನಡೆದ 55ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಭೆಯ ಬಳಿಕ ಪತ್ರಕರ್ತರಿಗೆ ಈ ಕುರಿತು ಮಾತನಾಡಿದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಯಡಿಯೂರಪ್ಪ ಅವರ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಸುಮಾರು 20 ಲಕ್ಷ ಜನರು ಈ ಸಂದರ್ಭದಲ್ಲಿ ಸೇರಲಿದ್ದಾರೆ ಎಂದು ತಿಳಿಸಿದರು.
ಯಡಿಯೂರಪ್ಪ ಅಭಿಮಾನಿಗಳ ಬಳಗವನ್ನು ರಚಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ, ಅದ್ಧೂರಿ ಸಮಾರಂಭ ಆಯೋಜಿಸಿ, ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿ ಹಿರಿಯ ನಾಯಕರು, ನಾಡಿನ ಮಠಾಧೀಶರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಣವೂ ಅಲ್ಲ, ಪರ್ಯಾಯವೂ ಅಲ್ಲ: ರೇಣುಕಾಚಾರ್ಯ
ಯಾರ ಪರ ಅಥವಾ ಯಾವ ಬಣದ ವಿರುದ್ಧವೂ ಪರ್ಯಾಯ ಸಭೆ ನಡೆಸುತ್ತಿಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಕಾರ್ಯಕರ್ತರು, ಮುಖಂಡರು, ಪ್ರಜ್ಞಾವಂತರ ಅಪೇಕ್ಷೆ ಮೇರೆಗೆ ಯಡಿಯೂರಪ್ಪರ ಜನುಮ ದಿನಾಚರಣೆಗೆ ನಿರ್ಧರಿಸಿ ದ್ದೇವೆ. ಇದು ಪರ್ಯಾಯ ಸಭೆ ಅಲ್ಲ, ಬಿಜೆಪಿ ನಾಯಕರ ವಿರುದ್ಧದ ಸಮಾವೇಶವೂ ಅಲ್ಲ. ನಾವು ಯಾರ ವಿರುದ್ಧವೂ ಮಾತನಾಡಿಲ್ಲ. ಮಾತನಾಡುವುದೂ ಇಲ್ಲ ಎಂದು ಹೇಳಿದರು.
ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ನಾವೆಲ್ಲರೂ ಒಂದೆಡೆ ಸೇರಿ ಚರ್ಚೆ ಮಾಡಿದ್ದೇವೆ. ಸುಮಾರು 60ಕ್ಕೂ ಹೆಚ್ಚು ಜನ ಮಾಜಿ ಸಚಿವರು, ಮಾಜಿ ಶಾಸಕರು ದಾವಣಗೆರೆಯಲ್ಲಿ ಸಭೆ ಸೇರಬೇಕೆಂದು ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸಭೆಯಲ್ಲಿ ನಿರ್ಧರಿಸಿದ್ದೆವು. ಡಿ.9 ಮತ್ತು 10ರಂದು ಸಭೆ ನಿಗದಿಯಾಗಿತ್ತು. ಎಸ್.ಎಂ.ಕೃಷ್ಣ ಅವರ ನಿಧನದಿಂದಾಗಿ ಸಭೆ ಮುಂದೂಡಲಾಗಿತ್ತು. ಇಂದು ನಾವು ಇಲ್ಲಿ ಸಭೆ ನಡೆಸಿದ್ದೇವೆ ಎಂದು ಹೇಳಿದರು.
ರಾಜಕೀಯ ಸಭೆ ಕರೆಯುವ ಅಧಿಕಾರ ಇರುವುದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಮಾತ್ರ. ಯಡಿಯೂರಪ್ಪ ಅವರ ಅಭಿಮಾನಿಗಳು ಮಾತ್ರವೇ ಸಭೆ ಸೇರಿ ಜನ್ಮ ದಿನಾಚರಣೆ ಕುರಿತು ಚರ್ಚೆ ಮಾಡಿದ್ದೇವೆ. ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾಹಿತಿ ನೀಡಿದರು.
ಈ ಸಭೆಗೆ ಇನ್ನು ಕೆಲವರು ಕಾರಣಾಂತರಗಳಿಂದ ಬಂದಿಲ್ಲ ಅವರು ಸಭೆಯನ್ನು ಬೆಂಬಲಿಸಿ ಸಂದೇಶ ಕಳುಹಿಸಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.
ಯತ್ನಾಳ್ಗೆ ಮನದಟ್ಟು ಮಾಡಲು ಇಂದು ಸಭೆ – ಸೋಮಶೇಖರ್ ರೆಡ್ಡಿ
ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಯಡಿಯೂರಪ್ಪ ನವರ ವಿರುದ್ದ ಮಾತನಾಡುತ್ತಿದ್ದಾರೆ. ಪಕ್ಷವನ್ನು ಎಷ್ಟೋ ವರ್ಷಗಳಿಂದ ಕಟ್ಟಿ ಬೆಳೆಸಿದ ನಾಯಕರು ಯಡಿಯೂರಪ್ಪ ನವರು. ಅವರ ವಿರುದ್ಧ ಮಾತನಾಡುತ್ತಿರುವುದು ತಪ್ಪು ಎಂದು ಮನದಟ್ಟು ಮಾಡಿಸೋಕೆ ಸಭೆ ಮಾಡುತ್ತಿದ್ದೇವೆ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನೂರಕ್ಕೆ ನೂರರಷ್ಟು ಈ ಸಭೆಯನ್ನು ಯತ್ನಾಳ್ ವಿರುದ್ದವೇ ನಡೆಸಲಾಗುತ್ತಿದೆ. ಈ ಸಭೆ ಮಾಡಿ ದಿಲ್ಲಿಗೆ ಹೋಗುವ ವಿಚಾರ ಇದೆ ಎಂದವರು ಹೇಳಿದರು.
ಸಭೆ ನಿರ್ಣಯಗಳು
– 2025ರ ಫೆಬ್ರವರಿ 27ರಂದು 20 ಲಕ್ಷ ಜನರನ್ನು ಸೇರಿಸಿ ಬಿ.ಎಸ್. ಯಡಿಯೂರಪ್ಪ ಜನ್ಮ ದಿನ ಆಚರಿಸುವುದು.
– ಮುಂದಿನ ವಿಧಾನಸಭಾ ಚುನಾವಣೆಯವರೆಗೆ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸುವುದು.
– ಹೊಸದಿಲ್ಲಿಗೆ ತೆರಳಿ ಬಿಎಸ್‌ವೈ ಜನ್ಮ ದಿನಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವುದು.
– ಸಭೆಯಲ್ಲಿ ಭಾಗವಹಿಸಿದ 60ಕ್ಕೂ ಮಾಜಿ ಶಾಸಕರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಗಳನ್ನು ಕಲ್ಪಿಸುವುದು.
ಸಭೆಗೆ ಮುನ್ನ ದೇವಸ್ಥಾನಗಳ ಭೇಟಿ
ಬಿಜೆಪಿ ಮಾಜಿ ಸಚಿವರು, ಶಾಸಕರು ಸಭೆಗೂ ಮುನ್ನ ರೇಣುಕಾಚಾರ್ಯ ನೇತೃತ್ವದಲ್ಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಬಿಜೆಪಿ ನಾಯಕರನ್ನು ಸ್ವಾಗತಿಸಿದರು.
ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಾಯಕರು, ನಂತರ ಬಾತಿ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಖಾಸಗಿ ಹೋಟೆಲ್ಗೆ ಆಗಮಿಸಿ ಸಭೆ ನಡೆಸಿದರು.
ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ಪಕ್ಷವನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರು ಚುನಾವಣಾ ಕಣದಿಂದ ಮಾತ್ರ ಹಿಂದೆ ಸರಿದಿದ್ದಾರೆ, ರಾಜಕಾರಣದಲ್ಲಿ ಇನ್ನೂ ಸಕ್ರಿಯರಾಗಿದ್ದಾರೆ. ಅವರ ಜನ್ಮದಿನದಂದು 20 ಲಕ್ಷ ಜನರನ್ನು ಸೇರಿಸಿ ಅದ್ಧೂರಿ ಹುಟ್ಟು ಹಬ್ಬ ಆಚರಿಸಿ, ರಾಜ್ಯಕ್ಕೆ ಸಂದೇಶ ರವಾನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇಂದಿನ ಸಭೆಯ ನಿರ್ಣಯಗಳನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರಲು ಶೀಘ್ರದಲ್ಲೇ ದೆಹಲಿಗೆ ನಿಯೋಗ ತೆರಳಲಿದ್ದೇವೆ ಎಂದು ಹೇಳಿದರು.
ನಾವೆಲ್ಲರೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ನಮಗೆಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇದೆ. ಎಲ್ಲರಿಗೂ ಸೂಕ್ತ ಸ್ಥಾನಮಾನ ಕೊಡಬೇಕು ಅನ್ನೋದು ನಮ್ಮ ಅಭಿಪ್ರಾಯವಾಗಿದೆ. ಇಂದು ನಡೆದ ಸಭೆಯಲ್ಲಿ 10 ಜನ ಪ್ರಮುಖರ ಸಮಿತಿ ರಚನೆ ಮಾಡಲಾಗಿದೆ. ರಾಜಕೀಯ ಸಮಾವೇಶ ಮಾಡಲು ಅವಕಾಶ ಇಲ್ಲದಿರುವುದರಿಂದ ಯಡಿಯೂರಪ್ಪ ಅವರ ಹುಟ್ಟುಹಬ್ಬ ಆಚರಣೆ ಮಾಡುತ್ತೇವೆ. ಜನವರಿ 16ಕ್ಕೆ ಮತ್ತೆ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೊಳ್ಳೆಗಾಲ ಮಹೇಶ್, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ಬ್ಯಾಡಗಿ ಬಳ್ಳಾರಿ ವಿರುಪಾಕ್ಷಪ್ಪ, ರಾಣೇಬೆನ್ನೂರು ಅರುಣ್ ಕುಮಾರ್ ಪೂಜಾರ, ಮಾನ್ವಿ ಗಂಗಾಧರ ನಾಯ್ಕ, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಎಂ. ಬಸವರಾಜ್ ನಾಯ್ಕ, ಮಾಡಾಳು ವಿರೂಪಾಕ್ಷಪ್ಪ, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್‌ಗುಡ್, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್, ತರೀಕೆರೆ ಶಾಸಕ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ಮಾಡಾಳ್ ಮಲ್ಲಿಕಾರ್ಜುನ್, ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.