ನಗರದಲ್ಲಿನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಿಡಿಕಾರಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ
ದಾವಣಗೆರೆ, ಡಿ. 15- ಬೆಂಗಳೂರು ನಗರದಲ್ಲಿ ಐಟಿ, ಬಿಟಿ, ಕಾರ್ಖಾನೆಗಳು ಸ್ಥಾಪನೆಯಾಗುತ್ತಲೇ ಇವೆ. ಆದರೆ ಆಯಾ ರಾಜ್ಯದ ಜನರಿಗೆ ಮಾತ್ರ ಉದ್ಯೋಗ ನೀಡುತ್ತಿದ್ದಾರೆ. ಈ ನೆಲದ ಮಕ್ಕಳಿಗೆ ಉದ್ಯೋಗ ನೀಡುವಂತಾಗಬೇಕು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿ, ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮನವಿ ಮಾಡಿದರು.
ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ 69 ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ `ಸಾಂಸ್ಕೃತಿಕ ಸಂಭ್ರಮ’, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಅನ್ಯಭಾಷಿಗರ ಹಾವಳಿ ಹೆಚ್ಚಾಗಿದ್ದು, ನಮ್ಮ ಅನ್ನ, ನಮ್ಮ ಹಕ್ಕು, ನಮ್ಮ ಉದ್ಯೋಗ, ನಮ್ಮ ಆಸ್ತಿ ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಮೌನವಹಿಸಿದೆ. ಸರೋಜಿನಿ ಮಹಿಷಿ ವರದಿ ಜಾರಿಗೆ ತರುತ್ತೇವೆ. ಶೇ. 60 ರಷ್ಟು ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಡುತ್ತೇವೆ ಎಂದು ಭರವಸೆ ನೀಡಿದ ಸರ್ಕಾರ, ಮುಖ್ಯಮಂತ್ರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಈ ನೆಲದ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ಸದನದಲ್ಲಿ ಘರ್ಜಿಸಬೇಕಾಗುತ್ತದೆ ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಸಕ ಬಸವಂತಪ್ಪ ಅವರಲ್ಲಿ ಮನವಿ ಮಾಡಿದರು.
ಹಣವಂತರು, ಪ್ರಭಾವಿಗಳು ರಾಜಕಾರಣಕ್ಕೆ ಬರುತ್ತಾರೆ. ಆದರೆ ಜನಪರ, ನಾಡಿನ ಪರ ಕೆಲಸ ಮಾಡುವ ರಾಜಕಾರಣಿಗಳ ಅವಶ್ಯಕತೆ ಇದೆ. ಕನ್ನಡ ನೆಲದ ಮರಾಠಿಗರು ಕನ್ನಡ ಪರ ಇದ್ದರೆ ಎಂಇಎಸ್ ಗೂಂಡಾಗಳು ಜಾತಿ, ಭಾಷೆ ಎತ್ತಿಕಟ್ಟಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಸಲ್ಲದು ಎಂದು ಹೇಳಿದರು.
ಹಿಂದಿ ಮಾತ್ರ ರಾಷ್ಟ್ರಭಾಷೆಯಲ್ಲಿ. ಈ ನೆಲದ ಕನ್ನಡ ಕೂಡ ರಾಷ್ಟ್ರಭಾಷೆ. ಈ ನೆಲದಲ್ಲಿ ಇರುವ ಎಲ್ಲಾ ಭಾಷಿಗರು ಕನ್ನಡ ನಾಡು, ನುಡಿಗೆ ಗೌರವ ಕೊಡಲೇ ಬೇಕು. ನಾಡು, ನುಡಿ, ನೆಲ, ಜಲ, ಗಡಿ ರಕ್ಷಣೆಗೆ ಮತ್ತು ಕನ್ನಡಿಗರ ಪರ ಎಂಥದೇ ಹೋರಾಟಕ್ಕೂ ನಾವು ಬದ್ಧರಿದ್ದೇವೆ ಎಂದರು.
ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕನ್ನಡ ಪರ ಸಂಘಟನೆಗಳು ಕೇವಲ ನಾಡು, ನುಡಿ, ನೆಲ, ಜಲದ ರಕ್ಷಣೆ ಮಾಡುವುದು ಮಾತ್ರವಲ್ಲದೇ, ನೋಂದವರ, ಶೋಷಿತರ, ದಮನಿತರ ಪರ ಹೋರಾಟ ಮಾಡಿ, ಅವರಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಆಂಗ್ಲಮಯವಾಗುತ್ತಿದ್ದು, ಮಮ್ಮಿ, ಡ್ಯಾಡಿ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಕನ್ನಡತನ ಮರೆಯಾಗುತ್ತಿದೆ. `ಅಪ್ಪ-ಅವ್ವ’ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಕನ್ನಡ ಭಾಷಾ ಬೆಳವಣಿಗೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಹದಡಿ ಶ್ರೀ ವಿದ್ಯಾರಣ್ಯ ಯೋಗೀಶ್ವರರ ಮಠದ ಶ್ರೀ ಸದ್ಗುರು ಮುರುಳೀಧರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್. ರಾಮಪ್ಪ, ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಉಮಾಶಂಕರ್, ಹರಿಹರದ ರೇವಣಸಿದ್ಧಪ್ಪ, ವಕೀಲ ಕುಡುಪಲಿ ನಾಗರಾಜ್, ಮಿಮಿಕ್ರಿ ಗೋಪಿ, ಚಂದನವನದ ಸಹ ನಿರ್ದೇಶಕ ಚಂದ್ರು ಸರ್ಕಾರ್, ನಿವೃತ್ತ ಅಭಿಯೋಜಕ ಎಸ್.ವಿ.ಪಾಟೀಲ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕನ್ನಡ ಚಳವಳಿ ಹೋರಾಟಗಾರ ಟಿ. ಶಿವಕುಮಾರ್, ವಿನಯ್ ಜೋಗಪ್ಪನವರ್, ಹಾಲುಮತ ಸಮಾಜದ ಮುಖಂಡ ಸಿದ್ಧಲಿಂಗಪ್ಪ, ಚಂದ್ರು ದೀಟೂರು, ಮಧುಮೈಲಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್, ಇತರೆ ಪದಾಧಿಕಾರಿಗಳಾದ ಸೈಯದ್ ನಜೀರ್, ಎಂ. ಲೋಕೇಶ್, ಶಿವರಾಜ ಗೌಡ್ರು, ಚಿದಾನಂದ ಸವದತ್ತಿ, ಸೋಮಶೇಖರ್, ರಮೇಶ್, ಪ್ರೀತಮ್ ಗೌಡ, ಸೈಯದ್ ಸಮೀರ್,ಸಿ.ಎನ್. ಮಂಜುನಾಥ್, ದಾನೇಶ್, ಚಂದ್ರು ಮತ್ತಿತರರು ಭಾಗವಹಿಸಿದ್ದರು.