ಮಲೇಬೆನ್ನೂರು, ಡಿ.13- ಗ್ರಾಮ ದೇವತೆಗೆ ಬಿಟ್ಟ ಹರಕೆಯ ಕೋಣಕ್ಕಾಗಿ ಎರಡು ಗ್ರಾಮಗಳ ಗ್ರಾಮಸ್ಥರ ನಡುವಿನ ಕಿತ್ತಾಟ ಹೊನ್ನಾಳಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿದೆ.
ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಮತ್ತು ಹೊನ್ನಾಳಿ ತಾಲ್ಲೂಕಿನ ಕುಳಗಟ್ಟೆ ಗ್ರಾಮಸ್ಥರು ದೇವರ ಕೋಣಕ್ಕಾಗಿ ಕಳೆದ 15 ದಿನಗಳಿಂದ ಜಗಳ ಮಾಡುತ್ತಿದ್ದು, ಈ ಬಗ್ಗೆ ಮಲೇಬೆನ್ನೂರು ಹಾಗೂ ಹೊನ್ನಾಳಿ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.
ಎರಡೂ ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿ ನಡೆಸಿದ ಸಭೆಗಳು ವಿಫಲವಾಗಿವೆ. ಕುಣೆಬೆಳಕೆರೆ ಹಾಗೂ ಕುಳಗಟ್ಟೆ ಗ್ರಾಮಸ್ಥರು ಪ್ರತ್ಯೇಕವಾಗಿ ದಾವಣಗೆರೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾಗಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಸಮಸ್ಯೆಯ ಕೇಂದ್ರ ಬಿಂದುವಾಗಿರುವ ದೇವರ ಕೋಣ ಸದ್ಯ ಶಿವಮೊಗ್ಗದ ಗೋಶಾಲೆಯಲ್ಲಿದೆ.
ಗಂಟೆ ಹೊಡೆದು ಪ್ರಮಾಣಕ್ಕೆ ಸಿದ್ಧ : ಕುಣೆಬೆಳಕೆರೆ ಗ್ರಾಮದ ದಂಡೇರ ತಿಪ್ಪೇಶ ನೀಡಿದ ದೂರಿನ ಮೇರೆಗೆ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾವು ಸುಮಾರು 7-8 ವರ್ಷಗಳಿಂದ ಕೋಣ ಸಾಕಿದ್ದು ಇತ್ತೀಚೆಗೆ ಕುಳಗಟ್ಟೆ ಗ್ರಾಮದ ಕೆಲವರು ದೇವರಬೆಳಕೆರೆ ಹತ್ತಿರ ಇದ್ದ ನಮ್ಮ ಕೋಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಅದು ನಮ್ಮದೇ ಕೋಣವೆಂದು ನಾವು ದೇವಸ್ಥಾನದಲ್ಲಿ ಗಂಟೆ ಹೊಡೆದು ಪ್ರಮಾಣ ಮಾಡಲು ಸಿದ್ಧರಿದ್ದೇವೆ ಎಂದು ತಿಪ್ಪೇಶ ಅವರನ್ನು ಬೆಂಬಲಿಸಿ ಕುಣೆಬೆಳಕೆರೆ ಗ್ರಾಮಸ್ಥರು ತಿಳಿಸಿದ್ದಾರೆ.
ಡಿ.ಎನ್.ಎ. ಪರೀಕ್ಷೆ ಮಾಡಿಸಿ: ನಮ್ಮೂರಿನ ಗ್ರಾಮ ದೇವತೆಗೆ ಬಿಟ್ಟ ಕೋಣ ಎರಡು ತಿಂಗಳ ಹಿಂದೆ ಕಾಣೆಯಾಗಿತ್ತು. ಈ ಬಗ್ಗೆ ಹೊನ್ನಾಳಿ ಪೊಲೀಸರಿಗೆ ದೂರು ನೀಡಿ, ಜಾಲತಾಣದಲ್ಲಿ ಕೋಣದ ಫೋಟೋ ಹಾಕಿದ್ದೇವೆ. ಇತ್ತೀಚೆಗೆ ನಮ್ಮ ಕೋಣ ದೇವರಬೆಳಕೆರೆ ಬಳಿ ಇದೆ ಎಂಬ ಮಾಹಿತಿ ಮೇರೆಗೆ, ನಾವು ಅಲ್ಲಿಗೆ ತೆರಳಿ ಕೋಣವನ್ನು ತೆಗೆದುಕೊಂಡು ಬಂದೆವು. ಇದು ನಮ್ಮದೇ ಕೋಣ. ಈ ಕೋಣದ ಜತೆಗೆ ಒಡಹುಟ್ಟಿದ ಒಂದು ಹೆಣ್ಣು ಒಂದು ಗಂಡು ಕೋಣಗಳೂ ಇವೆ. ಅವುಗಳ ಡಿಎನ್‌ಎ ಪರೀಕ್ಷೆ ಮಾಡಿಸಿ ಎಂದು ದಾವಣಗೆರೆ ಎಸ್ಪಿಗೆ ಮನವಿ ಮಾಡಿದ್ದೇವೆ ಎಂದು ಕುಳಗಟ್ಟೆ ಗ್ರಾಮದ ಮಾದಪ್ಪ, ರಂಗಣ್ಣ ತಿಳಿಸಿದ್ದಾರೆ.
ಎರಡೂ ಗ್ರಾಮಸ್ಥರ ಆರೋಪ-ಪ್ರತ್ಯಾರೋಪ ಮತ್ತು ಕಿತ್ತಾಟಗಳು ಎರಡು ಪೊಲೀಸ್ ಠಾಣೆಗಳ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಹರಸಾಹಸ ಪಡುವಂತಾಗಿದೆ.