ಬೆಳಗಾವಿಯಲ್ಲಿ ಲಾಠಿ ಚಾರ್ಜ್ಗೆ ಖಂಡನೆ
ದಾವಣಗೆರೆ, ಡಿ. 12- 2 ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಲಿಂಗಾಯತ ಪಂಚಮ ಸಾಲಿ ಸಮಾಜದ ವತಿಯಿಂದ ನಡೆಸಲಾದ ಸುವರ್ಣಸೌಧ ಮುತ್ತಿಗೆ ಕಾರ್ಯಕ್ರಮದ ವೇಳೆ ಪೊಲೀಸರು ನಡೆಸಿದ ದೌರ್ಜನ್ಯ ಮತ್ತು ಲಾಠಿ ಚಾರ್ಜ್ ಖಂಡಿಸಿ ನಗರದ ಜಯದೇವ ವೃತ್ತದಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬೆಳಗಾವಿಯಲ್ಲಿ ಪ್ರತಿಭಟನೆಗೆ ಮುಂದಾದ ಪಂಚಮಸಾಲಿ ಸಮಾ ಜದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ ಎಂದರು.
ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧದ ಬಳಿ ಸಮಾವೇಶ ನಡೆಸಲಾ ಗಿತ್ತು. ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೋರಾಟಗಾರರಿಗೆ ಸ್ಪಂದಿಸಲಿಲ್ಲ. ಸ್ಥಳಕ್ಕೆ ಬಂದು ಮನವಿ ಸಹ ಪಡೆಯಲಿಲ್ಲ. ತಮ್ಮನ್ನು ಭೇಟಿಯಾಗಲು ಮುಖಂಡರಿಗೆ ಹೇಳಿದ್ದೆ ಅವರು ಬರಲಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಸಮಾಜದ ಬಾಂಧವರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಸರ್ಕಾರ ಹೋರಾಟಗಾರರ ಮನವೊಲಿಸುವ ಬದಲು ಲಾಠಿ ಚಾರ್ಜ್ ಮಾಡಿಸಿ, ಹಿಟ್ಲರ್ ಸಂಸ್ಕೃತಿಯನ್ನು ಅನುಸರಿಸಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಮಾಜದ ಕೆಲವು ಅಮಾಯಕರ ಕೈಮುರಿದಿದ್ದು, ಮತ್ತೆ ಕೆಲವರ ತಲೆಗೆ ಗಂಭೀರವಾಗಿ ಪೆಟ್ಟುಗಳಾಗಿದ್ದು, ಕಾಂಗ್ರೆಸ್ ಸರ್ಕಾರ ಅಮಾಯಕ ಪಂಚಮಸಾಲಿ ಸಮಾಜದ ಮೇಲೆ ದಬ್ಬಾಳಿಕೆ ನಡೆಸಿದೆ ಎಂದು ಕಿಡಿಕಾರಿದರು.
ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀಸಲಾತಿ ಹೋರಾಟಕ್ಕೆ ತಕ್ಕ ಉತ್ತರ ನೀಡಬೇಕೆಂದು ಶಿವಶಂಕರ್ ಆಗ್ರಹಿಸಿದರು.
ಪಂಚಮಸಾಲಿ ಸಮಾಜದವರು ಕೃಷಿ ಕುಟುಂಬದಿಂದ ಬಂದವರು. ಈ ದೇಶಕ್ಕೆ ಅನ್ನ ಕೊಡುವ ರೈತರ ಮೇಲೆಯೇ ದೌರ್ಜನ್ಯ ನಡೆಸಿರುವುದು ಅಕ್ಷಮ್ಯ. ಬರುವ ದಿನಗಳಲ್ಲಿ ಸಮಾಜದ ಜನ ಬಡ್ಡಿ ಸಮೇತ ತಕ್ಕ ಉತ್ತರ ನೀಡಲಿದ್ದಾರೆಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದವರು ಪಂಚಮಸಾಲಿ ಸ್ವಾಮೀಜಿಯವರ ಮತ್ತು ಹೋರಾಟಗಾರರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಬಿ.ಜಿ. ಅಜಯಕುಮಾರ್, ಮಹಾಂತೇಶ್ ಒಣರೊಟ್ಟಿ, ರಾಜಶೇಖರ ನಾಗಪ್ಪ, ಅಶೋಕ್ ಗೋಪನಾಳ್, ಚಂದ್ರಶೇಖರ್ ಪೂಜಾರ್, ಕೆ.ಎಂ. ವೀರೇಶ್, ಯೋಗೀಶ್, ಚನ್ನಬಸವನಗೌಡ, ಮಹೇಶ್ ಬನ್ನಿಕೋಡು, ಕಿರಣ್, ಎಸ್.ಎನ್.ಮಲ್ಲಿಕಾರ್ಜುನ್ ಮತ್ತಿತರರು ಪಾಲ್ಗೊಂಡಿದ್ದರು.