ಹರಿಹರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನ
ಹರಿಹರ, ಡಿ.12- ಸಾಮಾನ್ಯ ಸಭೆಗೆ ಭಾಗವಹಿಸದಿ ರುವುದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರು ವುದು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರನ್ನು ವರ್ಗಾವಣೆ ಮಾಡುವಂತೆ 21 ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡ ಘಟನೆ ಇಲ್ಲಿನ ನಗರಸಭೆಯಲ್ಲಿ ನಡೆದಿದೆ.
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ, 21 ಸದಸ್ಯರು ಸಹಿ ಮಾಡಿದ ಪತ್ರವನ್ನು ಆರ್.ಸಿ ಜಾವೇದ್ ನೀಡಿದರು.
ಹಿರಿಯ ಸದಸ್ಯ ಎ. ವಾಮನಮೂರ್ತಿ ಮತ್ತು ಸದಸ್ಯೆ ಅಶ್ವಿನಿ ಕೃಷ್ಣ ಅದನ್ನು ಅನುಮೋದಿಸಿ, ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಗೆ ನೀಡಿದರು. ಅಧ್ಯಕ್ಷೆ ಕವಿತಾ ಮಾರುತಿ ಸಭೆಯಲ್ಲಿ ಪ್ರತಿಯನ್ನು ಓದಿ, ಜಿಲ್ಲಾಧಿಕಾರಿ ಬಳಿ ನಿಯೋಗ ಹೋಗಿ ವರ್ಗಾವಣೆಗೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.
ನಗರದಲ್ಲಿ ಹೆಚ್ಚಾಗಿರುವ ಹಂದಿ, ನಾಯಿಗಳ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದರೂ ಸಹ ಸ್ಪಂದಿಸುತ್ತಿಲ್ಲ. ಅವರು ಕೂಡ ಸಭೆಯಲ್ಲಿ ಭಾಗವಹಿಸದೇ ಸದಸ್ಯರಿಗೆ ಅವಮಾನ ಮಾಡುವಂತೆ ಮಾಡಿದ್ದು, ನಗರಸಭೆ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದರು.
ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಬೋರವೇಲ್ ಒಂದೇ ಒಂದು ಇದ್ದು, ಅದು ದುರಸ್ತಿ ಬಂದರೆ ಸಾರ್ವಜನಿಕರು ಕುಡಿಯುವ ನೀರಿಗೆ ಪರದಾಡುವಂತೆ ಆಗುತ್ತದೆ. ಸ್ವಚ್ಛತೆ ಇಲ್ಲದೆ ಜನರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಹಲವಾರು ಸಮಸ್ಯೆಗಳು ಇರುವುದರಿಂದ, ನಗರಸಭೆ ಅಧ್ಯಕ್ಷರು ಸಾಮಾನ್ಯ ಸಭೆಯನ್ನು ಮಾಡುವ ತೀರ್ಮಾನ ಮಾಡಿ ಸಭೆಯನ್ನು ಮಾಡುವುದಕ್ಕೆ ಮುಂದಾದರೇ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಯವರು ನನಗೆ ಕೆಲಸ ಇದೆ ಎಂದು ಹೇಳಿ ಸಭೆಯಿಂದ ಹೋಗಿದ್ದು ಸಭೆಯಲ್ಲಿದ್ದ ಎಲ್ಲಾ ಸದಸ್ಯರಿಗೆ ಅವಮಾನ ಮಾಡಿದ್ದು ಅಲ್ಲದೇ ನಗರದ ಜನತೆಗೆ ಮಾಡಿದ ದ್ರೋಹದ ಕೆಲಸವಾಗಿದೆ. ಇಂತಹ ಪೌರಾಯುಕ್ತರು ನಮ್ಮ ನಗರಕ್ಕೆ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಸರ್ಕಾರ ಕೂಡಲೇ ಇವರನ್ನು ಬೇರೆ ನಗರಕ್ಕೆ ವರ್ಗಾವಣೆ ಮಾಡುವಂತೆ ಹೇಳಿದರು.
ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮಾತನಾಡಿ, ಪೌರಾಯುಕ್ತ ಸುಬ್ರಹ್ಮಣ್ಯಶೆಟ್ಟಿ ನಗರಕ್ಕೆ ಬಂದಾಗಿನಿಂದ ಸಾರ್ವಜನಿಕರ ಕೆಲಸಗಳಾಗದೇ ಜನರು ರೋಸಿ ಹೋಗಿದ್ದಾರೆ. ಖಾತೆ ಎಕ್ಸ್‌ಟ್ರಾಕ್ಟ್ ಹಾಗೂ ಖಾತೆ ಬದ ಲಾವಣೆ ಮಾಡಿಸಲು ಪರದಾಡುವಂತಾಗಿದೆ ಎಂದರು.
ಹಲವಾರು ಬಡಾವಣೆಗಳಲ್ಲಿ ಕಸದ ವಾಹನಗಳು ಕೂಡ ಇಲ್ಲದೇ ಇರುವುದರಿಂದ ಕಸವನ್ನು ಬೇರೆ ಕಡೆಗಳಲ್ಲಿ ಸಾಗಿಸದೇ ಬಡಾವಣೆಗಳು, ಗಬ್ಬೆದ್ದು ನಾರುತ್ತಿವೆ. ಕಸದ ವಾಹನಗಳು ತುಕ್ಕು ಹಿಡಿದು ಸೋರುತ್ತವೆ. ಇದರಿಂದ ಕಸವನ್ನು ಹಾದಿ ಉದ್ದಕ್ಕೂ ಚೆಲ್ಲಿಕೊಂಡು ಹೋಗುತ್ತವೆ ಎಂದರು.
ಸದಸ್ಯ ದಾದಾ ಖಲಂದರ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಪಕ್ಕೀರಮ್ಮ, ಪಿ.ಎನ್. ವಿರುಪಾಕ್ಷ, ಎಸ್.ಎಂ. ವಸಂತ್, ಕೆ.ಜಿ. ಸಿದ್ದೇಶ್, ರಜನಿಕಾಂತ್, ಹನುಮಂತಪ್ಪ, ಉಷಾ ಮಂಜುನಾಥ್, ಅಶ್ವಿನಿ ಕೃಷ್ಣ, ರತ್ನ ಡಿ ಉಜ್ಜೇಶ್, ನಿಂಬಕ್ಕ ಚಂದಪೂರ್ ಸುಮಿತ್ರಮ್ಮ, ಶಹಜಾದ್ ಸನಾವುಲ್ಲಾ, ಮುಜಾಮಿಲ್ ಬಿಲ್, ಇಬ್ರಾಹೀಂ, ನಾಮನಿರ್ದೇಶನ ಸದಸ್ಯರಾದ ಕೆ.ಬಿ. ರಾಜಶೇಖರ್, ಇಸ್ಲಾಯಿಲ್, ಬಾಬುಲಾಲ್, ಅಬ್ದುಲ್ ಅಲಿಂ, ಬಿ. ಅಲ್ತಾಫ್, ನೂರಜಾನ್, ನಾಗರತ್ನ, ಲಕ್ಷ್ಮೀ ಮೋಹನ್ ದುರುಗೋಜಿ ಇತರರು ಹಾಜರಿದ್ದರು.