ಬಸಾಪುರದ ಭಜನೆ ಕಲಾವಿದರ ನೆರವಿಗೆ ಬಂದ ಪಾಲಿಕೆ ಸದಸ್ಯರು

ಬಸಾಪುರದ ಭಜನೆ ಕಲಾವಿದರ ನೆರವಿಗೆ ಬಂದ ಪಾಲಿಕೆ ಸದಸ್ಯರು

ವೀರಶೈವ ಮುಖಂಡರ ಭರವಸೆ

ಬಸವ ಕಲಾ ಲೋಕದ ಕಲಾವಿದರಿಗೆ ನ್ಯಾಯ ಒದಗಿಸು ವಂತೆ ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷರಾಗಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರಿಗೆ ಮನವಿ ಮಾಡಿ ಶಾಶ್ವತ ಪರಿಹಾರ ಒದಗಿಸುವಂತೆ ಕೇಳಿಕೊಳ್ಳುತ್ತೇವೆ ಎಂದು ವೀರಶೈವ ಮುಖಂಡರು ಭರವಸೆ ನೀಡಿದ್ದಾರೆ.

ದಾವಣಗೆರೆ, ಡಿ.12-   ಇಂದಿನ `ಜನತಾವಾಣಿ’ಯಲ್ಲಿ ಪ್ರಕಟವಾದ ಅರವತ್ತು ಜನ ಕಲಾವಿದರ ಒಟ್ಟು ಕುಟುಂಬ ಬೀದಿಗೆ ಎಂಬ ವರದಿಗೆ ಮಹಾನಗರ ಪಾಲಿಕೆಯ ಸದಸ್ಯರು ತಕ್ಷಣ ಸ್ಪಂದಿಸಿದ್ದು ಬಸಾಪುರ ಭಜನಾ ಕಲಾವಿದರ ನೆರವಿಗೆ ಮುಂದಾದರು. 

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ಕೆ. ಪ್ರಸನ್ನ ಕುಮಾರ್ ನೇತೃತ್ವದೊಂದಿಗೆ ಮಾಜಿ ಮೇಯರ್ ಎಸ್.ಟಿ. ವೀರೇಶ್ ಮತ್ತು ಕೆಲವು ಪಾಲಿಕೆಯ ಸದಸ್ಯರು ಪತ್ರಿಕಾ ವರದಿಯನ್ನು ಗಮನಿಸಿ ಜಿಲ್ಲಾಧಿಕಾರಿಗಳು ಮತ್ತು ಕಮೀಷನರ್ ಅವರನ್ನು ಭೇಟಿಯಾಗಿ 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವ 60 ಜನ ಭಜನಾ ಕಲಾವಿದರ ಮನೆಯನ್ನು ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆಯ ಅಧಿಕಾರಿಗಳ ಕ್ರಮವನ್ನು ತಡೆಯಲು ವಿನಂತಿಸಿಕೊಂಡರು. 

ಅದನ್ನು ಆಲಿಸಿದ ಜಿಲ್ಲಾಧಿಕಾರಿಗಳು ಭಜನೆ ಕಲಾವಿದರ ಮನೆಯನ್ನು ಒಡೆದು ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಅದನ್ನು ಮಾಡದಂತೆ ನಿರ್ದೇಶನ ನೀಡಿದರು. ನಂತರ ಪ್ರಸನ್ನ ಕುಮಾರ್, ವೀರೇಶ್ ಮತ್ತು ಇತರೆ ಮಹಾನಗರ ಪಾಲಿಕೆ ಸದಸ್ಯರು ಬಸಾಪುರಕ್ಕೆ ಭೇಟಿ ನೀಡಿ ಅಲ್ಲಿ ತೆರವುಗೊಳಿಸಲು ಆಗಮಿಸಿದ್ದ ಅಧಿಕಾರಿಗಳಿಗೆ ತೆರವುಗೊಳಿಸುವ ಕಾರ್ಯವನ್ನು ತಕ್ಷಣ ನಿಲ್ಲಿಸಲು ಹೇಳಿದರು. 

ಒಂದು ವೇಳೆ ಹಾಗೆ ಮಾಡಿದರೆ ದೊಡ್ಡ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಎಷ್ಟೋ ಪಾರ್ಕ್, ರಸ್ತೆ ಸರ್ಕಾರಿ ಜಾಗಗಳು ಅತಿಕ್ರಮಣವಾಗಿವೆ. ಅವುಗಳನ್ನು ತೆರವುಗೊಳಿಸದೆ ಈ ಬಡಪಾಯಿ ಕುಟುಂಬದ ಮೇಲೆ ಕಿರುಕುಳ ಕೊಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಬಸವ ಕಲಾ ಲೋಕದ ಕಲಾವಿದರು ಮೃತಪಟ್ಟವರ ಮನೆಗೆ ಹೋಗಿ ಭಜನೆ ಮಾಡುತ್ತಾ, ಯಾವುದಾದರೂ ಪೂಜಾ ಕಾರ್ಯಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದ ಒಂದಿಷ್ಟು ಹಣದಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿದ್ದಾರೆ. ಅವರ ಬದುಕನ್ನು ಸಮಾಧಿ ಮಾಡುತ್ತಿರುವುದು ಅಮಾನವೀಯ ವರ್ತನೆ ಎಂದು ಕಿಡಿಕಾರಿದರು. ಬಡ ಕಲಾವಿದರ ಮನೆಯನ್ನು ತೆರವುಗೊಳಿಸಲು ಆಗಮಿಸಿದ್ದ ಅಧಿಕಾರಿಗಳು ಹಿಂದಿರುಗಿದರು. 

ನಂತರ ಬಸವ ಕಲಾ ಲೋಕದ ಕಲಾವಿದರೊಂದಿಗೆ ಮಾತನಾಡಿದ ಪ್ರಸನ್ನ ಕುಮಾರ್, ವೀರೇಶ್ ಮತ್ತು ಇತರೆ ಪಾಲಿಕೆ ಸದಸ್ಯರು ಇಷ್ಟರಲ್ಲಿಯೇ ಶಾಸಕರು, ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ನಿಮಗೆ ಸೂಕ್ತ ಭದ್ರತೆ ಮುತ್ತು ಮನೆಯ ಹಕ್ಕು ಪತ್ರ ನೀಡುವಂತೆ ಮನವೊಲಿಸಲು ಮುಂದಾಗುತ್ತೇವೆ ಎಂಬ ಭರವಸೆಯನ್ನು ನೀಡಿದರು. ನಿಟ್ಟುಸಿರು ಬಿಟ್ಟ ಬಸವ ಕಲಾ ಲೋಕದ ಕಲಾವಿದರು ತಮ್ಮ ನೆರವಿಗೆ ಬಂದ ಪಾಲಿಕಾ ಸದಸ್ಯರುಗಳಿಗೆ, ಜಿಲ್ಲಾಧಿಕಾರಿಗಳಿಗೆ, ಕೃತಜ್ಞತೆ ಸಲ್ಲಿಸಿದರು. 

ವಿಪಕ್ಷನಾಯಕ ಕೆ. ಪ್ರಸನ್ನಕುಮಾರ್‌, ಎಸ್‌.ಟಿ. ವೀರೇಶ್‌, ಸದಸ್ಯರಾದ ಶಿವಲೀಲಾ ಕೊಟ್ರಯ್ಯ ಶಿವಾನಂದ ಇತರರು ಇದ್ದರು.

error: Content is protected !!