ಸ್ವದೇಶಿ ಮೇಳ ಉದ್ಘಾಟಿಸಿದ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ
ದಾವಣಗೆರೆ, ಡಿ.11- ಸ್ವಾವಲಂಬನೆಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇತ್ತೀಚಿನ ವರ್ಷಗಳಲ್ಲಿ ಭಾರತ ಸ್ವಾವಲಂಬಿಯಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಸ್ವದೇಶಿ ಜಾಗರಣ ಮಂಚ್ ವತಿಯಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿರುವ ಸ್ವದೇಶಿ ಮೇಳದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪೆಟ್ರೋಲ್, ಡೀಸೆಲ್ ಹೆಚ್ಚಾಗಿ ಬಳಸುತ್ತಿದ್ದ ನಮ್ಮ ದೇಶವು, ಇಂದು ಅದಕ್ಕೆ ಪರ್ಯಾಯವಾಗಿ ಎಥೆನಾಲ್ ಬಳಕೆ ಕಂಡುಕೊಳ್ಳುತ್ತಿದೆ. ಇದರಿಂದ ಕೋಟ್ಯಾಂತರ ಹಣ ಉಳಿತಾಯವಾಗುತ್ತಿದೆ. ದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂದರು.
ಭಾರತೀಯ ಜನರು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದ್ದಾರೆ. ಆದರೆ ವಿದೇಶಿಯರು ಯೋಗ, ಧ್ಯಾನ ಸೇರಿದಂತೆ ಭಾರತೀಯ ಸಂಸ್ಕೃತಿ ಅನುಸರಿಸುವುದು ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಯುವ ಜನತೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ವ್ಯಕ್ತಿಯ ಆರೋಗ್ಯವೇ ಬಹುದೊಡ್ಡ ಸಂಪತ್ತು. ಶಾರೀರಿಕ ಆರೋಗ್ಯ ದೇಶದ ಆರೋಗ್ಯವೂ ಹೌದು. ಮನುಷ್ಯ ಆರೋಗ್ಯವಾಗಿರಬೇಕಾದರೆ ದೇಶೀಯ ಉತ್ಪನ್ನಗಳನ್ನು ಬಳಸಬೇಕು ಎಂದು ಶ್ರೀಗಳು ಹೇಳಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸ್ವದೇಶಿ ಹಾಗೂ ವಿದೇಶಿ ವಸ್ತುಗಳ ನಡುವೆ ಬೆಲೆಗಳ ಅಂತರ ಹೆಚ್ಚಾಗಿದೆ. ಸ್ಥಳೀಯ ವಸ್ತುಗಳಿಗೆ ಚೌಕಾಶಿ ಮಾಡುವ ಜನರು, ವಿದೇಶಿ ವಸ್ತುಗಳನ್ನು ಹೇಳಿದಷ್ಟು ಬೆಲೆ ನೀಡಿ ಕೊಳ್ಳುತ್ತಾರೆ. ಸ್ವದೇಶಿ ವಸ್ತುಗಳೂ ಕಡಿಮೆ ಬೆಲೆಗೆ ಸಿಗುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.
ಉಳಿತಾಯ ಸಂಸ್ಕೃತಿಯಿಂದ ಆರ್ಥಿಕ ಸುಧಾರಣೆ: ಕುಮಾರಸ್ವಾಮಿ
ದಾವಣಗೆರೆ, ಡಿ.11- ಸಾಲ ಮಾಡಿ ತುಪ್ಪ ತಿನ್ನುವ ಸಂಸ್ಕೃತಿ ಪಾಶ್ಚಾತ್ಯರದ್ದು, ಉಳಿತಾಯ ಮಾಡುವ ಸಂಸ್ಕೃತಿ ಭಾರತೀಯರದ್ದು ಎಂದು ಸ್ವದೇಶಿ ಚಿಂತಕ ಪ್ರೊ.ಬಿ.ಎಂ. ಕುಮಾರ ಸ್ವಾಮಿ ಹೇಳಿದರು.
ಭಾರತೀಯ ಉಳಿತಾಯ ಸಂಸ್ಕೃತಿಯಿಂದ ದೇಶ ಆರ್ಥಿಕವಾಗಿ ಬಲಾಢ್ಯವಾಗಿದೆ. ಆದರೆ ಸಾಲ ಮಾಡುವ ಸಂಸ್ಕೃತಿಯಿಂದ ವಿದೇಶಗಳು ಸಾಲದ ಸುಳಿಗೆ ಸಿಲುಕುತ್ತಿವೆ ಎಂದರು.
ಅಮೇರಿಕಾದಲ್ಲಿ ಕುಟುಂಬದ ಹೊಣೆಯನ್ನು ಸರ್ಕಾರವೇ ಹೊರುತ್ತದೆ. ಇದರಿಂದ ಸಾಮಾಜಿಕ ವೆಚ್ಚಕ್ಕಾಗಿ ಅದು 30 ಬಿಲಿಯನ್ ಡಾಲರ್ ವ್ಯಯ ಮಾಡುತ್ತದೆ. ಆದರೆ ಭಾರತದಲ್ಲಿ ನಾವೇ ಕುಟುಂಬದ ಜವಾಬ್ದಾರಿ ಹೊರುತ್ತವೆ. ಉಳಿತಾಯ ಮನೋಭಾವ ಭಾರತೀಯರಿಗೆ ರಕ್ತಗತವಾಗಿಯೇ ಬಂದಿದೆ ಎಂದರು.
ಎಲ್ಲಿಯವರೆಗೆ ಕುಟುಂಬಗಳು ಗಟ್ಟಿಯಾಗಿರುತ್ತವೋ ಅಲ್ಲಿಯವರೆಗೂ ದೇಶದ ಆರ್ಥಿಕತೆ ಉತ್ತಮವಾಗಿರುತ್ತದೆ. ಸಾಲ ಮಾಡುವ, ಕ್ರೆಡಿಟ್ ಕಾರ್ಡ್ ಬಳಸುವ ಪರಂಗಿ ರೋಗದಿಂದ ಯುವ ಜನ ಹೊರ ಬರಬೇಕು ಎಂದರು.
ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡುತ್ತಾ, ಪ್ರಪಂಚದಲ್ಲಿಯೇ ಅತ್ಯುತ್ತಮ ಸಂಸ್ಕೃತಿಯುಳ್ಳ ದೇಶ ಭಾರತ. ಆದರೆ ಯುವ ಪೀಳಿಗೆ ಸಂಸ್ಕೃತಿ, ಸಂಸ್ಕಾರದಿಂದ ದೂರವಾಗುತ್ತಿದ್ದಾರೆ. ವಿದೇಶಿ ಸಂಸ್ಕೃತಿಯ ವ್ಯಾಮೋಹ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡು ಕುಟುಂಬಗಳು ಮರೆಯಾಗುತ್ತಿವೆ. ಪತಿ-ಪತ್ನಿಯೇ ಕುಟುಂಬ ಎಂಬಂತಾಗಿದೆ. ಕಷ್ಟಪಟ್ಟು ಓದಿಸಿದ ಮಕ್ಕಳು ವಿದೇಶಕ್ಕೆ ತೆರಳಿದಾಗ ಹೆತ್ತವರು ವೃದ್ಧಾಶ್ರಮಕ್ಕೆ ಸೇರುತ್ತಿದ್ದಾರೆ ಇದು ನೋವಿನ ವಿಚಾರ ಎಂದರು.
ಭ್ರಷ್ಟಾಚಾರ ಹಾಗೂ ಜಾತೀಯತೆ ಇಲ್ಲದಿದ್ದರೆ ಭಾರತ ಪ್ರಾಯಶಃ ಪ್ರಪಂಚದಲ್ಲಿ ನಂ.1 ದೇಶವಾಗುತ್ತಿತ್ತು. ಸ್ಥಳೀಯ ಸೌಲಭ್ಯ, ಅವಕಾಶಗಳನ್ನು ಬಳಸಿಕೊಂಡು ಸ್ವದೇಶಿ ಉದ್ಯಮಗಳನ್ನು ಸ್ಥಾಪಿಸುವತ್ತ ಯುವ ಜನರು ಒಲವು ತೋರಬೇಕು. ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಮೇಳದ ಸಂಯೋಜಕ ಎಸ್.ಟಿ. ವೀರೇಶ್ ಮಾತನಾಡಿ, ಸ್ವದೇಶಿ ವಸ್ತು, ಭಾಷೆ, ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸುವ ಹಾಗೂ ಸ್ವದೇಶಿ ಉದ್ದಿಮೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದೆ. 21 ಆಹಾರ ಮಳಿಗೆಗಳೂ ಸೇರಿ 250 ಮಳಿಗೆಗಳಿವೆ ಎಂದು ಹೇಳಿದರು. ಸಂಚಾಲಕಿ ಮಂಜುಳ ಮಹೇಶ್, ಸಂಘಟಕರಾದ ಚೇತನ್ ಎಸ್. ಉಪಸ್ಥಿತರಿದ್ದರು.
ಸ್ವದೇಶಿ ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸ್ವದೇಶಿ ವಸ್ತುಗಳ ಮಾರಾಟ ನಡೆಯಿತು. ಗೃಹೋಪಯೋಗಿ ವಸ್ತುಗಳು, ಮಹಿಳೆಯರು, ಪುರುಷರು ಹಾಗೂ ಮಕ್ಕಳ ಉಡುಪುಗಳು, ಅಲಂಕಾರಿಕ ವಸ್ತುಗಳು, ಬಾಯಲ್ಲಿ ನೀರೂರಿಸುವಂತಹ ತಿನಿಸುಗಳು ಮಾರಾಟಕ್ಕೆ ಲಭ್ಯವಿದ್ದವು.
ಇನ್ನು ಆಹಾರಕ್ಕೆ ಸಂಬಂಧಿಸಿದ ಮಳಿಗೆಗಳಲ್ಲಿ ಅಕ್ಕಿರೊಟ್ಟಿ, ತಾಲಿಪಟ್ಟು, ಮಶ್ರೂಮ್ ಬಿರಿಯಾನಿ, ಜೋಳದ ಅಂಬಲಿ, ಆಯುರ್ವೇದ ಉಪಹಾರಗಳು, ಕಶಾಯ ಸೇರಿದಂತೆ ಹಲವಾರು ಮಳಿಗೆಗಳಿದ್ದವು