ದಾವಣಗೆರೆ, ಡಿ.11- ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ ಬಸ್ ನಿಲ್ದಾಣದ ಅನುಪಯುಕ್ತ ಕಟ್ಟಡವನ್ನು ತೆರವುಗೊಳಿಸಿ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿ ದಾವಣಗೆರೆ ಹೈಸ್ಕೂಲ್ ಮೈದಾನ ಉಳಿಸಿ ಹೋರಾಟ ಸಮಿತಿಯು ಸಹಾಯಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಕೆಲವು ದಿನಗಳ ಹಿಂದೆಯೇ ಹೈಸ್ಕೂಲ್ ಮೈದಾನ ದಲ್ಲಿ ನಿರ್ಮಾಣವಾಗಿದ್ದ ತಾತ್ಕಾಲಿಕ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣ ಮೂಲ ಜಾಗಕ್ಕೆ ಸ್ಥಳಾಂತರ ಗೊಂಡಿದ್ದರೂ ಮೈದಾನದ ಜಾಗ ಸಾರ್ವಜನಿಕ ಹಾಗೂ ಕ್ರೀಡಾಪಟುಗಳ ಬಳಕೆಗೆ ಮುಕ್ತವಾಗಿ ತಲುಪುತ್ತಿಲ್ಲ.
ಮೈದಾನದ ಮೂಲ ಉದ್ದೇಶ ಹೊರತು ಪಡಿಸಿ ವರ್ಷವಿಡೀ ಇನ್ನಿತರೆ ಕಾರ್ಯಗಳಿಗೆ ಬಳಕೆ ಆಗುತ್ತಿರುವುದರಿಂದ ಮೈದಾನದಲ್ಲಿ ಗುಂಡಿಗಳು ಉಲ್ಬಣವಾಗಿವೆ. ವಾಣಿಜ್ಯ ಉಪಯೋಗಕ್ಕಾಗಿ ಬಳಸುವಾಗ ಹಾಕಿದ ಟೆಂಟಿನ ತಗ್ಗುಗಳು ಮೈದಾನದ ಸ್ವರೂಪ ಬದಲಿಸಿವೆ.
ಕೂಡಲೇ ಈ ದುಸ್ಥಿತಿ ಸರಿಪಡಿಸಿ ಕ್ರೀಡಾಪಟುಗಳಿಗೆ ಸಹಾಯಕವಾಗುವ ನಿಟ್ಟಿನಲ್ಲಿ ಮೈದಾನದಲ್ಲಿನ ತಗ್ಗು-ದಿನ್ನೆಗಳನ್ನು ಸಮತಟ್ಟಾಗಿಸಿ, ಸುಸಜ್ಜಿತಗೊಳಿಸಬೇಕು ಮತ್ತು ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕೆಂದು ಸಮಿತಿಯು ಒತ್ತಾಯಿಸಿದೆ.
ಮೈದಾನದಲ್ಲಿ ವಾಣಿಜ್ಯ ಬಳಕೆಗೆ ಅವಕಾಶ ನೀಡಬಾರದು. ವಿವಿಧ ಸರ್ಕಾರಿ ಕ್ರೀಡಾಕೂಟಗಳನ್ನು ಏರ್ಪಡಿಸುವ ಮೂಲಕ ಯುವಕರಲ್ಲಿ ಕ್ರೀಡಾ ಮನೋಭಾವ ಬೆಳೆಸುವಂತೆ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಸಮಿತಿ ಆಗ್ರಹಿಸಿದೆ.
ಈ ವೇಳೆ ಹೋರಾಟ ಸಮಿತಿಯ ಪಿ. ಪರಶುರಾಮ್, ಕಾಂತರಾಜ್, ಅಬ್ದುಲ್ ಖಾದರ್, ಸೈಯದ್ ಖಾಸಿಂ, ಕುತ್ಬುದ್ದೀನ್, ಅಲ್ತಾಫ್, ಅಮ್ಜದ್ ಖಾನ್, ಮೊಹಮ್ಮದ್ ಇಮ್ತಿಯಾಜ್, ವೆಂಕಟೇಶ್ ಇತರರು ಇದ್ದರು.