ದಾವಿವಿಯಲ್ಲಿ `ಪರಿನಿರ್ವಾಣ ದಿವಸ’ ದಲ್ಲಿ ಪ್ರಾಧ್ಯಾಪಕ ಡಾ.ಎಂ.ಯು ಲೋಕೇಶ್
ದಾವಣಗೆರೆ,ಡಿ. 11- ಜಾತೀಯತೆ ತೊಲಗಿಸಿ ದೇಶದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಾನತೆ ಯನ್ನು ಸಂವಿಧಾನದ ಮೂಲಕ ಅನುಷ್ಠಾನಕ್ಕೆ ತರುವಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು ಎಂದು ಪ್ರಾಧ್ಯಾಪಕ ಡಾ.ಎಂ.ಯು ಲೋಕೇಶ್ ಅಭಿಪ್ರಾಯಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ 68ನೇ ಡಾ.ಬಿ.ಆರ್ ಅಂಬೇ ಡ್ಕರ್ ಪರಿನಿರ್ವಾಣ ದಿವಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಬುದ್ಧ, ಬಸವಣ್ಣನವರ ನಂತರ ಸಮಾನತೆ, ಸಮಸಮುದಾಯ ಅಭಿವೃದ್ಧಿಯ ತತ್ವ ಆದರ್ಶ ಗಳನ್ನು ಜಾರಿಗೊಳಿಸಿ ನವ ಸಮಾಜದ ಪರಿಕಲ್ಪನೆಯನ್ನು ಪ್ರತಿಷ್ಠಾಪಿಸಲು ಡಾ.ಅಂಬೇಡ್ಕರ್ ಯತ್ನಿಸಿದರು. ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಅನಕ್ಷರತೆ, ಮೂಢನಂಬಿಕೆಯಂತಹ ಅಂಧಕಾರ ದಿಂದ ಕೂಡಿದ ಸಮಾಜವನ್ನು ಪರಿವರ್ತಿಸಿ ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ಕೈಜೋಡಿಸು ವಂತೆ ಮಾಡುವಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾದುದು ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಬದಲಾವಣೆಯ ಮಾತುಗಳಾಡಿ ದೇಶದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ, ವಿದ್ಯಾರ್ಥಿಗಳು ಅದಕ್ಕೆ ಅವಕಾಶ ನೀಡದೆ ಅಂಬೇಡ್ಕರ್ ಅವರ ಆಶಯವನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು, ಪಟ್ಟಬದ್ಧ ಹಿತಾಸಕ್ತಿಗಳಿಗೆ ಅವಕಾಶ ನೀಡದೆ ಜಾಗೃತರಾಗಿ, ಮತದಾನದ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸುವ ಸರ್ಕಾರವನ್ನು ರೂಪಿಸಲು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಡಾ.ಯು.ಎಸ್.ಮಹಾಬಲೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸತ್ಯ, ನಿಷ್ಠೆ ಮತ್ತು ಪ್ರಾಮಾಣಿಕತೆ ಯನ್ನು ಮೈಗೂಡಿಸಿಕೊಂಡು ದೇಶದಲ್ಲಿ ಉತ್ತಮ ವಾದ ಪ್ರಜೆಗಳಾಗಿ ಬಾಳಬೇಕು. ಡಾ.ಅಂಬೇಡ್ಕರ್ ಅವರ ಬದುಕು, ಮೌಲ್ಯ, ಸಂದೇಶಗಳನ್ನು ಪ್ರೇರಣೆ ಯಾಗಿ, ಮಾರ್ಗದರ್ಶಕ ಸೂತ್ರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್ಸಿ, ಎಸ್ಟಿ ವಿದ್ಯಾರ್ಥಿ ಅಭಿವೃದ್ಧಿ ಘಟಕದ ಸಂಚಾಲಕ ಡಾ.ನಿರಂಜನ್.ಎಂ.ಹೆಚ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡೀನ್ ಪ್ರೊ.ಆರ್.ಶಶಿಧರ್, ಐಕ್ಯೂಎಸಿ ನಿರ್ದೇಶಕ ಪ್ರೊ.ಗೋವಿಂದಪ್ಪ ಉಪಸ್ಥಿತರಿದ್ದರು.