ಸಂಘರ್ಷಕ್ಕೆ ತಿರುಗಿದ ಪಂಚಮಸಾಲಿ ಹೋರಾಟ

ಸಂಘರ್ಷಕ್ಕೆ ತಿರುಗಿದ ಪಂಚಮಸಾಲಿ ಹೋರಾಟ

ಹೆದ್ದಾರಿ ತಡೆದು ಪ್ರತಿಭಟನೆ, ಲಾಠಿ ಚಾರ್ಜ್, ಸ್ವಾಮೀಜಿ, ಮುಖಂಡರು ವಶಕ್ಕೆ

ಬೆಳಗಾವಿ, ಡಿ.10- ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಪಂಚಮಸಾಲಿ ಮೀಸಲಾತಿ ಹೋರಾಟ ಭಾರೀ ಸಂಘರ್ಷಕ್ಕೆ ದಾರಿ ಮಾಡಿತು. ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಬೀಸಿದರು. ರೊಚ್ಚಿಗೆದ್ದ ಜನ ಪೊಲೀಸರ ಮೇಲೆ ಕಲ್ಲು, ಚಪ್ಪಲಿ‌ ತೂರಿದರು.

ಇದರಿಂದ ಕೆಲವು ಪ್ರತಿಭಟನಾಕಾರರ ತಲೆ ಒಡೆದು ರಕ್ತ ಚೆಲ್ಲಿತು. ಹಲವರ ಕೈ, ಕಾಲುಗಳಿಗೆ ಪೆಟ್ಟು ಬಿದ್ದಿತು. ಹಲವರ ಬಟ್ಟೆಗಳು ಹರಿದವು.

ಅಷ್ಟೊತ್ತಿಗೆ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೆದ್ದಾರಿಗೆ ಬಂದು ಅಲ್ಲೇ ಧರಣಿ ಕುಳಿತರು. ಪೊಲೀಸರು ಹಲವರನ್ನು ಬಸ್ಸಿನಲ್ಲಿ ಹತ್ತಿಸಿದರು. ಮುಂದೆ ಧಾವಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಈರಣ್ಣ ಕಡಾಡಿ, ಅರವಿಂದ ಬೆಲ್ಲದ ಮುಂತಾದವರು ಪೊಲೀಸ್ ವಾಹನಗಳನ್ನು ಬಿಗಿಯಾಗಿ ಹಿಡಿದು ಎದುರಿಗೇ ನಿಂತರು. ಪೊಲೀಸರು‌ ಅನಿವಾರ್ಯವಾಗಿ ಎಲ್ಲರನ್ನೂ ಕೆಳಗೆ ಇಳಿಸಿದರು.

2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ ನಡೆಸಿದ್ದ ಪಂಚಮಸಾಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಾರದ್ದನ್ನು ಖಂಡಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಮಧ್ಯಾಹ್ನದಿಂದ ಶಾಂತಿಯುತವಾಗಿ ಜನರನ್ನು ತಡೆದು ನಿಲ್ಲಿಸಿದ್ದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಸಂಘರ್ಷ ಯಾತ್ರೆಯನ್ನು ಘೋಷಿಸಿದರು.

ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂರು ಬಾರಿ ಲಾಠಿ ಬೀಸಿದರು. ಕೆಲವರಿಗೆ ತಲೆ ಒಡೆದು ರಕ್ತ ಸೋರಿತು. ಮತ್ತೆ ಕೆಲವರ ಮೈ-ಕಾಲುಗಳಿಗೆ ಗಾಯಗಳಾದವು. ಆದರೂ ಜನ ಹೆದ್ದಾರಿಯಲ್ಲಿ ಓಡಾಡಿದರು‌. ಪೊಲೀಸರು ಮತ್ತು ಹೋರಾಟ ಗಾರರ ನಡುವಿನ ಸಂಘರ್ಷ ನಿರಂತರವಾಗಿ ಮುಂದುವರೆಯಿತು.

ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬ್ಯಾರಿಕೇಡ್ ಅಡ್ಡ ಇಟ್ಟು, ವಾಹನಗಳನ್ನು ನಿಲ್ಲಿಸಿ ಜನರನ್ನು ತಡೆದರು. ಹೆದ್ದಾರಿ ತುಂಬಾ ಜನ ಹರಿದಾಡಿದರು. ನಾಲ್ಕು ಕಡೆ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಿದ್ದರು. ಇದರ ನಡುವೆ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಹೋದ ಹಿರಿಯ ಅಧಿಕಾರಿಗಳು, ಕೆಲವೇ ಜನರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವಂತೆ ಮನವಿ ಮಾಡಿಕೊಂಡರು. ಇದಕ್ಕೆ ಒಪ್ಪದ ಸ್ವಾಮೀಜಿ ನಾವು ಶಾಂತಿಯುತವಾಗಿ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸಚಿವರಾದ ಎಚ್.ಸಿ.ಮಹಾದೇವಪ್ಪ, ವೆಂಕಟೇಶ,‌ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಸುಧಾಕರ್ ಅವರು ಪ್ರತಿಭಟನಾ ವೇದಿಕೆಗೆ ಬಂದು ಮುಖ್ಯಮಂತ್ರಿಗಳ ಪರವಾಗಿ ಮನವಿ ಮಾಡಿದರು. ಹೋರಾಟದ ಉದ್ದೇಶವನ್ನು ಸಿಎಂ ಗಮನಕ್ಕೆ ತರುತ್ತೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು‌. ಆಗ ಜನಸ್ತೋಮದಿಂದ ಭಾರೀ ಪ್ರಮಾಣದ ಕೂಗಾಟ, ಚೀರಾಟ, ಶಿಳ್ಳೆ-ಕೇಕೆಗಳು ಆರಂಭವಾದವು.

ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು. ಇಲ್ಲವೇ ನಾವೇ ಸೌಧಕ್ಕೆ ಹೋಗುತ್ತೇವೆ ಎಂದು ಘೋಷಣೆ ಮೊಳಗಿಸಿದರು‌‌. ಆಗ ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನ ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿದರು. ದಾರಿ, ಹೊಲ, ಸಿಕ್ಕ ಸಿಕ್ಕ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಲುಪಿದರು.

error: Content is protected !!