ಜಗಳೂರು, ಡಿ. 10 – ಪಂಚಭೂತಗಳಿಂದ ರಚಿತವಾದ ದೇಹ, ಜೀವ, ತೊರೆದ ಮೇಲೆ ಅದೇ ಪಂಚಭೂತಗಳಲ್ಲಿ ವಿಲೀನವಾಗಲಿದೆ. ಮನುಷ್ಯ ಜೀವನ ಸಾರ್ಥಕ ಗೊಳಿಸಲು ಇದ್ದಾಗಲೇ ಪುಣ್ಯದ ಕೆಲಸ ಮಾಡಿ ಎಂದು ಬೆಂಗಳೂರು ಸರ್ಪ ಭೂಷಣ ಮಠದ ಪೀಠಾಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ದೇವರು ಹೇಳಿದರು.
ತಾಲ್ಲೂಕಿನ ದೊಣ್ಣೆಹಳ್ಳಿ ಐತಿಹಾಸಿಕ ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ವತಿಯಿಂದ ಆಯೋಜಿಸಿದ್ದ ಕಾರ್ತಿಕ ಮಾಸ ದೀಪೋತ್ಸವ ಹಾಗು ಧರ್ಮ ಸಭೆ ಕಾರ್ಯಕ್ರಮದ ದಿವ್ಯ ಸಾನ್ನಿದ್ಯ ವಹಿಸಿ
ಮಾತನಾಡಿದ ಅವರು ಇದ್ದುದ್ದನ್ನು ಕಳೆದುಕೊಳ್ಳಲು ನಿಸ್ವಾರ್ಥ ಸೇವೆಯಿಂದ ಇರುವಷ್ಟರಲ್ಲಿಯೇ ಮತ್ತೊಬ್ಬರಿಗೆ ದಾನ ಧರ್ಮ ಮಾಡಬೇಕು ಎಂದು ಭಕ್ತರಿಗೆ ಸಲಹೆ ನೀಡಿದರು
ಕಾನಾಮಡುಗು ಶರಣ ಬಸವೇಶ್ವರ ದಾಸೋಹಿಹ ಮಠದ ಧರ್ಮದರ್ಶಿ ಐರ್ಮುಡಿ ಶರಣಾರ್ಯರು ಮಾತನಾಡಿ ಅಜ್ಞಾನದ ಕತ್ತಲು ತುಂಬಿದ ಸಮಾಜಕ್ಕೆ ಜ್ಞಾನದ ಬೆಳಕು ಚೆಲ್ಲುವ ಸಂಕೇತವೇ ಈ ದೀಪೋತ್ಸವ ಆಚರಣೆಯಾಗಿದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಶರಣ ಬಸವೇಶ್ವರ ಮಠ ಸರ್ವ ಜನಾಂಗಕ್ಕೂ ಅಕ್ಷರ ಅರಿವು ಹಾಗು ದಾಸೋಹ ಮಾಡುವ ಮೂಲಕ ಜನರ ಅಂಧಕಾರ ದೂರಮಾಡಿ ಜೀವನ ಹಸನುಗೊಳಿಸುವ ಕಾರ್ಯ ಮಾಡುತ್ತಾ ಬಂದಿದೆ ಎಂದರು.
ಮಾಜಿ ಶಾಸಕ ಹೆಚ್.ಪಿ. ರಾಜೇಶ್ ಮಾತನಾಡಿ ಜಗಳೂರು ಎಂಬ ಬರದ ನಾಡಿನಲ್ಲಿ ದೊಣ್ಣೆಹಳ್ಳಿ ಐತಿಹಾಸಿಕ ಕ್ಷೇತ್ರ. ಶರಣ ಬಸವೇಶ್ವರ ಅವರು ಇಲ್ಲಿ ನೆಲೆಸಿ ಭಕ್ತರಿಗೆ ಇಷ್ಟಾರ್ಥಗಳನ್ನು ನೆರವೇರಿಸಿ ಹಲವು ಪವಾಡಗಳನ್ನು ಮಾಡಿದ ಐತಿಹಾಸಿಕ ಹಿನ್ನೆಲೆಯಿದೆ. ವಿಶೇಷವಾಗಿ ಈ ಭಾಗದಲ್ಲಿ ಸಿರಿಧಾನ್ಯಗಳನ್ನ ಬೆಳೆದು ಮೊದಲ ಬೆಳೆ ಮಠಕ್ಕೆ ಅರ್ಪಿಸಿ ಎಲ್ಲಾ ಸಮುದಾಯಕ್ಕೂ ದಾಸೋಹ ನಡೆಸಲಾಗುತ್ತಿದೆ ಎಂದು ಹೇಳಿದರು
ಗ್ರಾಮದ ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ ಮಾತನಾಡಿ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಹೆಬ್ಬಾಗಿಲಿನಂತೆ ಇರುವ ಈ ಮಠ ಜಾತ್ಯತೀತ ವಾದ ಬುದ್ದ, ಬಸವಣ್ಣ, ಅಂಬೇಡ್ಕರ್ ಚಿಂತನೆ ಜೊತೆಗೆ ಸಾಂಸ್ಕೃತಿಕ, ಪಾರಂಪರಿಕ ಮಠವನ್ನಾಗಿ ಕಟ್ಟುವುದೇ ನಮ್ಮ ಸಂಕಲ್ಪವಾಗಿದೆ ಎಂದು ತಿಳಿಸಿದರು
ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ ಬರೀ ರಾಜಕಾರಣಿಗಳಿಂದ ಅಷ್ಟೇ ಮಠ ಬೆಳವಣಿಗೆ ಕಾಣದು ಮಠದ ಭಕ್ತರ ಸೇವೆ ಮತ್ತು ಸಹಕಾರದಿಂದ ಅಭಿವೃದ್ಧಿ ಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ಬಾಪೂಜಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್, ಚಿತ್ರದುರ್ಗ ವೀರಶೈವ ಸಮಾಜದ ಅಧ್ಯಕ್ಷ ಷಣ್ಮುಖಪ್ಪ. ಗ್ರಾ.ಪಂ.ಅಧ್ಯಕ್ಷ ತಿಪ್ಪೇಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಾಲತೇಶ್, ಜಾನಪದ ಕಲಾವಿದ ಬಿಷ್ಣಹಳ್ಳಿ ದಳವಾಯಿ, ವಿ.ಎಸ್.ಎಸ್.ಎನ್ ಅಧ್ಯಕ್ಷ ಪ್ರಕಾಶ್ ರೆಡ್ಡಿ , ಗ್ರಾಮದ ಹಿರಿಯ ಮುಖಂಡ ಬಸವರಾಜಯ್ಯ , ನಾಗಲಿಂಗಪ್ಪ, ಸುಭಾಷ್ ಚಂದ್ರ ಬೋಸ್ , ಸೇರಿದಂತೆ ಗ್ರಾ.ಪಂ. ಸದಸ್ಯರು, ಭಕ್ತಾದಿಗಳು ಇದ್ದರು.