ದಾವಣಗೆರೆ, ಡಿ.10 -ನಾಡು ಕಂಡಿರುವ ಹಿರಿಯ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ
ಡಾ. ಪ್ರಭಾ ಮಲ್ಲಿಕಾರ್ಜುನ್, ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಎಸ್.ಎಂ. ಕೃಷ್ಣ ಅವರು ರಾಜ್ಯದ ಜನತೆಯ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿಯಾಗಿದ್ದ ವೇಳೆ ಯಶಸ್ವಿನಿ ಯೋಜನೆ, ಸ್ತ್ರೀ ಶಕ್ತಿ ಸಂಘಗಳ ಉಗಮ, ಮಕ್ಕಳಿಗೆ ಬಿಸಿಯೂಟದ ಅಕ್ಷರ ದಾಸೋಹ, ಬೆಂಗಳೂರಿನಲ್ಲಿ ಐಟಿ ಹಬ್, ಮೆಟ್ರೋ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಯಾದವು.
ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದ ನಂತರ ಕಾಂಗ್ರೆಸ್ ಪಕ್ಷವನ್ನು ಸೇರಿದ ಎಸ್.ಎಂ ಕೃಷ್ಣ ಅವರು ಬಳಿಕ ಸಚಿವರಾಗಿ, ಮುಖ್ಯಮಂತ್ರಿಯಾಗಿ, ರಾಜ್ಯಪಾಲರಾಗಿ
ಹಾಗೂ ವಿದೇಶಾಂಗ ಸಚಿವರಾಗುವವರೆಗೂ ಬೆಳೆದರು. ಇವರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿ ಭೀಕರ ಬರಗಾಲ, ಕಾವೇರಿ ಹೋರಾಟ, ನಟ ರಾಜಕುಮಾರ್ ಅಪಹರಣಗಳಂತಹ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರು. ಆದರೂ ಕೆಲವು ಅದ್ಭುತ ಯೋಜನೆಗಳನ್ನ ಜಾರಿಗೆ ತಂದು ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕಿದರು ಎಸ್.ಎಂ ಕೃಷ್ಣಾ ಅವರು ಎಂದು ಸ್ಮರಿಸಿರುವರು.
ಶ್ರೀಯುತರ ಅಗಲಿಕೆಯಿಂದ ಕೋಟ್ಯಾಂತರ ಅಭಿಮಾನಿಗಳಿಗೆ ಮತ್ತು ಎಸ್.ಎಂ ಕೃಷ್ಣ ಅವರ ಒಡನಾಡಿಗಳಿಗೆ, ಆತ್ಮೀಯರಿಗೆ ಹಾಗೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿಯನ್ನು ಕರುಣಿಸಿ ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯರು ಸಂತಾಪ
ಸೂಚಿಸಿದ್ದಾರೆ.