ಬೇರೊಬ್ಬರ ಹಕ್ಕಿಗೆ ಚ್ಯುತಿ ಬಾರದಂತೆ ಬದುಕುವುದೇ ಮಾನವ ಹಕ್ಕು ಪಾಲನೆ

ಬೇರೊಬ್ಬರ ಹಕ್ಕಿಗೆ ಚ್ಯುತಿ ಬಾರದಂತೆ ಬದುಕುವುದೇ ಮಾನವ ಹಕ್ಕು ಪಾಲನೆ

ದಾವಣಗೆರೆ, ಡಿ.10- ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಬೇರೊ ಬ್ಬರ ಹಕ್ಕಿಗೆ ಚ್ಯುತಿ ಉಂಟುಮಾಡದೇ, ಗೌರವದಿಂದ ಬದುಕುವುದೇ ಮಾನವ ಹಕ್ಕು ಪಾಲನೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ.ಎನ್ ಹೆಗಡೆ ಹೇಳಿದರು. 

ಮಂಗಳವಾರ ನಗರದ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾನವ ಹಕ್ಕುಗಳ ದಿನಾಚರಣೆಯ ಪ್ರತಿಜ್ಞಾ ವಿಧಿ ಬೋಧಿಸಿ, ಅವರು ಮಾತನಾಡಿ ದರು. 

ಎರಡನೆ ಮಹಾಯುದ್ಧದ ಸಂದರ್ಭ ದಲ್ಲಿ ಜಾಗತಿಕವಾಗಿ ನಡೆದ ಸಾಮೂಹಿಕ ಹತ್ಯೆ, ಅನಾಗರಿಕ ಕೃತ್ಯಗಳ ಪರಿಣಾಮ ವಾಗಿ 1948 ರ ಡಿಸೆಂಬರ್ 10 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ನೀತಿಯನ್ನು ಘೋಷಣೆ ಮಾಡಿತು.  ಅಂದಿನಿಂದ ಈವರೆಗೂ ಮಾನವ ಹಕ್ಕುಗಳ ರಕ್ಷಣೆಯ ವಿಷಯ ಹಲವು ಮಜಲುಗಳನ್ನು ಕಂಡಿದೆ. ಆದರೂ ಮಾನವ ಹಕ್ಕುಗಳ ಉಲ್ಲಂಘನೆ ನಿತ್ಯ ನಡೆ ಯುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು.

ಕಷ್ಟಗಳಿಗೆ ಸ್ಪಂದಿಸದಿರುವುದು ಕೂಡ ಹಕ್ಕುಗಳ ಉಲ್ಲಂಘನೆಯಾಗುತ್ತದೆ.  ನಮ್ಮ ಸುತ್ತಮುತ್ತಲು ಇಂತಹ ಉಲ್ಲಂಘನೆ ಕಂಡುಬಂದಾಗ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕು.  ಇಂತಹ ಕೃತ್ಯಗಳನ್ನು ತಡೆಯುವ ಮೂಲಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಮಾತ ನಾಡಿ, ಬಾಲ ಕಾರ್ಮಿಕ ಮತ್ತು ಬಾಲ್ಯವಿ ವಾಹದಂತಹ ಪದ್ದತಿಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದರು.

ಸಾರ್ವಜನಿಕರು ನೈತಿಕತೆಯಿಂದ ನಡೆದುಕೊಳ್ಳಬೇಕು. ಬಾಲಕಾರ್ಮಿಕ ಪದ್ಧತಿ, ಜೀತಪದ್ಧತಿ, ಮಾನವ ಕಳ್ಳಸಾಗಣೆ, ಲೈಂಗಿಕ ಕಿರುಕುಳ, ಹೆಚ್‍ಐವಿ ಸೋಂಕಿತ ರಿಗೆ ಮಾಡಲಾಗುವ ತಾರತಮ್ಯ ಇವೆಲ್ಲವೂ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ಸಾಮಾನ್ಯವಾಗಿ ಪೊಲೀಸ್ ಇಲಾಖೆ ವಿರುದ್ಧವೇ ದಾಖಲಾಗುತ್ತವೆ.  ಇತರ ರೊಂದಿಗೆ ಅಗೌರವವಾಗಿ, ಮನುಷ್ಯತ್ವ ಮರೆತು ಕ್ರೂರ ರೀತಿಯಲ್ಲಿ ವರ್ತಿಸುವುದು ಸರಿಯಲ್ಲ.  ಮಾನವರಾದ ಎಲ್ಲರನ್ನೂ ಕಾನೂನು ಸಮಾನವಾಗಿಯೇ ನೋಡು ತ್ತದೆ ಎಂದರು. 

ಮಾನವ ಹಕ್ಕುಗಳಿಗೆ ಸುದೀರ್ಘ ವಾದ ಇತಿಹಾಸವಿದೆ, ಕ್ರಿಸ್ತಪೂರ್ವದಿಂ ದಲೂ ಮಾನವ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸಲಾಗಿದೆ. ಆಳುವವರ ಮತ್ತು ಆಳಿಸಿಕೊಳ್ಳುವವರ ನಡುವಿನ ಸಂಘರ್ಷದಿಂದ ಮಾನವ ಹಕ್ಕುಗಳು ಹುಟ್ಟಿಕೊಂಡಿವೆ. ಪ್ರಸ್ತುತ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲೂ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿರುವುದು ಬೇಸರದ ಸಂಗತಿ ಎಂದು ತಿಳಿಸಿದರು.

ವಕೀಲರಾದ ಎಲ್.ಹೆಚ್. ಅರುಣ ಕುಮಾರ್ ಮಾತನಾಡಿ, ಮನುಷ್ಯ, ಮನುಷ್ಯನನ್ನು ಗೌರವಿಸಬೇಕು. ಮಾನವ ದೇವರಾಗುವುದು ಸುಲಭ. ಆದರೆ ಮನುಷ್ಯ ಮನುಷ್ಯನಾಗುವುದು ಕಷ್ಟವಾಗಿದೆ. ಈ ಮನಸ್ಥಿತಿ ಬದಲಾಗ ಬೇಕು. ಎಲ್ಲರೂ ಮಾನವ ಹಕ್ಕುಗಳನ್ನು ಗೌರವಿಸಬೇಕು.  ಮಾನವ ಹಕ್ಕುಗಳು ಅನೇಕ ಉದ್ದೇಶಗಳನ್ನು ಹೊಂದಿದೆ. ಮಾನವ ಪ್ರಪಂಚದಲ್ಲಿ ಮುಕ್ತವಾಗಿ ಜೀವಿಸುವ ಮತ್ತು ಭೇದ-ಭಾವವಿಲ್ಲದೇ ಬದುಕುವ ಹಕ್ಕು ಹೊಂದಿದ್ದಾರೆ. ಯಾರ ಗುಲಾಮಗಿರಿಯಲ್ಲೂ ಇರದೇ,  ಸ್ವತಂತ್ರ ರಾಗಿ ಜೀವಿಸಬೇಕು. ಹಿಂಸೆ ಮತ್ತು ಅಮಾನವೀಯವಾಗಿ ಬೇರೊಬ್ಬರಿಂದ ಶಿಕ್ಷೆಗೆ ಒಳಗಾಗದಂತೆ ಜೀವಿಸುವ ಹಕ್ಕುಗಳು ಸೇರಿದಂತೆ, ವಿವಿಧ ಉದ್ದೇಶಗಳನ್ನು ಇದು ಹೊಂದಿದೆ ಎಂದು ತಿಳಿಸಿದರು.

ಆರ್.ಎಲ್ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಸ್.ಯತೀಶ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಹೊಸತು ಮಾಸ ಪತ್ರಿಕೆಯ ಸಂಪಾದಕರಾದ ಡಾ.ಸಿದ್ದನಗೌಡ ಪಾಟೀಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣನಾಯ್ಕ, ವಕೀಲರಾದ ಹನುಮಂತಪ್ಪ,  ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!