ಶ್ರೀ ವಿಶ್ವಬಂಧು ಮರಳಸಿದ್ದೇಶ್ವರ ದೇವಸ್ಥಾನದ 17ನೇ ವರ್ಷದ ಕಾರ್ತಿಕ ಮಹೋತ್ಸವ
ದಾವಣಗೆರೆ, ಡಿ.9- ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಹಿನ್ನೆಲೆಯಲ್ಲಿ ಕಾರ್ತೀಕ ಮಹೋತ್ಸವ ಕಾರ್ಯಕ್ರಮಗಳು ನಡೆಯಬೇಕು. ಬದಲಾಗಿ ದೀಪ ಹಚ್ಚಿ, ಕೇವಲ ಕಾರಾ ಮಂಡಕ್ಕಿ ತಿನ್ನಲು ಸೀಮಿತವಾಗಬಾರದು ಎಂದು ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದ ಕಾರ್ತಿಕ ಸಮಿತಿ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ವಿಶ್ವಬಂಧು ಮರಳಸಿದ್ದೇಶ್ವರ ದೇವಸ್ಥಾನದ 17ನೇ ವರ್ಷದ ಕಾರ್ತಿಕ ಮಹೋತ್ಸವದ ಪ್ರಯುಕ್ತ ಸಹಸ್ರ ದೀಪೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿದೇಶದಲ್ಲಿ ನಡೆದ ಕಥೆಯೊಂದನ್ನು ಉದಾಹರಿಸಿದ ಶ್ರೀಗಳು, ಪಾಶ್ಚಾತ್ಯ ದೇಶಗಳ ಜನರು ನೇರ ನಡೆ, ಶಿಸ್ತು ಹಾಗೂ ಆದೇಶ ಪಾಲನೆಯ ಗುಣ ಹೊಂದಿರುತ್ತಾರೆ. ಹೀಗಾಗಿ ಪಾಶ್ಚಾತ್ಯರಲ್ಲಿನ ಉತ್ತಮ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ತಿಕೋತ್ಸವ ಸಮಿತಿಯು ಪುಣ್ಯಕೋಟಿ ಗೋವಿನ ಕಥೆಯ ರೂಪಕ ಏರ್ಪಡಿಸಿರುವುದು ಶ್ಲ್ಯಾಘನೀಯ. ಈ ಕಥೆಯಿಂದ ಮಕ್ಕಳು ಪ್ರಭಾವಿತರಾಗುತ್ತಾರೆ. ಆನಂದ ಪಡುತ್ತಾರೆ. ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಆಕರ್ಷಣೀಯವಾಗಿ ಕಾರ್ಯಕ್ರಮಗಳನ್ನು ಸಮಿತಿಯು ನಡೆಸಲಿ ಎಂದು ಆಶಿಸಿದರು.
ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಮಾತನಾಡಿ, ಆರ್ಥಿಕ ಚೈತನ್ಯ ಇಲ್ಲದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಟ್ಟು ಮೇಲೆತ್ತುವ ಕೆಲಸವನ್ನು ಮಠದ ಹಿಂದಿನ ಮಠಾಧೀಶರು ಮಾಡಿದ್ದಾರೆ. ಈಗಿನ ಜಗದ್ಗುರುಗಳೂ ಸಹ ಅದರ ಮುಂದುವರೆದ ಭಾಗವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಕೇವಲ ಪದವಿ ನೀಡುವುದಲ್ಲ, ಶಿಕ್ಷಣದ ಜೊತೆ ಸಂಸ್ಕಾರವನ್ನೂ ನೀಡುವ ಕೆಲಸವನ್ನು ಸಿರಿಗೆರೆಯ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದು ಹೇಳಿದರು.
ಕಲೆಗಳಲ್ಲಿ ಆಸಕ್ತಿ ಬೆಳೆಸುವ ಜೊತೆಗೆ, ಸಮಾಜದಲ್ಲಿ ಸಂಸ್ಕಾರವಂತರಾಗಿ ಹೇಗೆ ಬಾಳಬೇಕೆಂಬುದನ್ನು ತಿಳಿಸಿಕೊಡುವ ಸಂಸ್ಥೆಗಳೆಂದರೆ ಅದು ಸಿರಿಗೆರೆ ಸಂಸ್ಥೆಗಳು ಎಂದರು.
ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ದೇವಸ್ಥಾ ನದ ಕಾರ್ತಿಕ ಸಮಿತಿ ಅಧ್ಯಕ್ಷ ಹೆಚ್. ಜಯಣ್ಣ ರಾಮಗೊಂಡನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ವೀರೇಶ್ ವಡೇನಾಪುರ, ಮಾಗನೂರು ಸಂಗಮೇಶ್‌ಗೌಡ್ರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ನಾಗರಕಟ್ಟೆ ಪ್ರಕಾಶ್, ನಿರ್ದೇಶಕರುಗಳಾದ ಬುಳ್ಳಾಪುರದ ಸಿದ್ದೇಶ್, ಸಿರಿಗೆರೆ ಸಿದ್ದೇಶ್, ಬೇತೂರು ರಾಜಣ್ಣ, ವಿ. ಶಿವಮೂರ್ತಿ, ಮೆಳ್ಳೇಕಟ್ಟೆ ಸಿದ್ದೇಶ್, ಕಾಕನೂರು ಪ್ರಭುಗೌಡ್ರು, ಕೊರಟಿಕೆರೆ ಶಿವಕುಮಾರ್, ಶಿವನಹಳ್ಳಿ ರಮೇಶ್
ಸಮಿತಿಯ ಕೋಶಾಧ್ಯಕ್ಷ ಕರೆಶಿವಪ್ಳರ ಸಿದ್ದೇಶ್ ವಂದಿಸಿದರು. ಸಂಗೀತ ಶಿಕ್ಷಕ ಅಜಯ್ ನಾರಾಯಣ್ ಪ್ರಾರ್ಥಿಸಿದರು. ಸಮಿತಿಯ ನಿರ್ದೇಶಕ ಸಿ.ಜಿ. ಜಗದೀಶ್ ಕೂಲಂಬಿ ಸ್ವಾಗತಿಸಿ, ನಿರೂಪಿಸಿದರು.
ಸಿರಿಗೆರೆ ತರಳಬಾಳು ಕಲಾ ಸಂಘದ ವಿದ್ಯಾರ್ಥಿಗಳಿಂದ ಗೋವಿನ ಹಾಡು ನೃತ್ಯ ರೂಪಕ, ಮಲ್ಲಕಂಬ, ಮಲ್ಲಿಹಗ್ಗ, ಜಡೇಕೋಲಾರ, ಭರತನಾಟ್ಯ ಕಾರ್ಯಕ್ರಮ ನಡೆಯಿತು. ತುಳಸಿ ಮಹಿಳಾ ಸಂಘದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.