ಶಿಲ್ಪಕಲೆಗೆ ಉದ್ಯಮದ ರೂಪ ನೀಡುವ ಅಗತ್ಯವಿದೆ

ಶಿಲ್ಪಕಲೆಗೆ ಉದ್ಯಮದ ರೂಪ ನೀಡುವ ಅಗತ್ಯವಿದೆ

ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರೊ.ಕುಂಬಾರ

ದಾವಣಗೆರೆ, ಡಿ.9- ಚಿತ್ರಕಲೆ ಮತ್ತು ಶಿಲ್ಪಕಲೆ ಸೇರಿ ಒಟ್ಟಾರೆ ಕಲೆಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಕೈಗಾರೀಕರಣ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಕಲಾವಿದರು ಆಲೋಚಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ 2007ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಕ್ಷೇತ್ರಗಳೂ ಆರ್ಥಿಕ ಸ್ವರೂಪ ಪಡೆಯುತ್ತಿರುವ ಇಂದಿನ ಯುಗದಲ್ಲಿ ಕಲಾ ವಿದ್ಯಾರ್ಥಿಗಳು ಹಾಗೂ ಕಲಾವಿದರು ಚಿತ್ರಕಲೆ ಮತ್ತು ಶಿಲ್ಪ ಕಲೆಗೆ ಉದ್ಯಮದ ರೂಪ ನೀಡುವ ಅಗತ್ಯವಿದೆ ಎಂದು ಹೇಳಿದರು.

ಇಂದು ಜಗತ್ತು ತಂತ್ರಜ್ಞಾನದ ಬಲದಲ್ಲಿ ಮುನ್ನಡೆಯುತ್ತಿದೆ. ಕಾರಣ, ಕಲೆಗೆ ಕೈಗಾರಿಕೆಯ ಅಥವಾ ಉದ್ಯಮದ ಸ್ವರೂಪ ನೀಡುವಾಗ ತಂತ್ರಜ್ಞಾನಕ್ಕೂ ಆದ್ಯತೆ ನೀಡಬೇಕು. ತಂತ್ರಜ್ಞಾನ ಸಮ್ಮಿಳಿತವಾಗಿದ್ದರೆ ನಿಮ್ಮ ಉದ್ಯಮವನ್ನು ಜನ ನಂಬುತ್ತಾರೆ. ತಂತ್ರಜ್ಞಾನ ಜತೆಗಿದ್ದರೆ ಕಲಾ ಪ್ರೋತ್ಸಾಹಕರು ನಿಮ್ಮ ಕಲಾಕೃತಿಗಳನ್ನು ಖರೀದಿಸಲು ಮುಂದೆ ಬರುತ್ತಾರೆ. ಕಾರಣ ಕಲೆಯ ಅದ್ಯಯನದ ಜತೆ ಜತೆಗೆ ತಂತ್ರಜ್ಞಾನದ ಕಲಿಕೆ ಮತ್ತು ಅಳವಡಿಗೆಯತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ವಜ್ರ ಮಹೋತ್ಸವದ ಅಂಗವಾಗಿ ವರ್ಷ ಪೂರ್ತಿ ನಾನಾ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಿದಂತೆ ವರ್ಷ ಪೂರೈಸಲು ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇವೆ. ಈ ಅವಧಿಯಲ್ಲಿ ಕಾಲೇಜಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಇದುವರೆಗಿನ ಎಲ್ಲ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಈ ಸಂಬಂಧ ಹಿರಿಯ ವಿದ್ಯಾರ್ಥಿಗಳಿಗೆ ಕಾಲೇಜು ಅಧ್ಯಾಪಕರು ಹಾಗೂ ಸಿಬ್ಬಂದಿ ಸಂದೇಶ ರವಾನಿಸಬೇಕು. ಕೊನೆಗೆ ಯಾರೊಬ್ಬರೂ ಬಂದು ನಮಗೆ ಅವಕಾಶ ನೀಡಲಿಲ್ಲ ಎಂದು ದೂರಬಾರದು ಎಂದು ಹೇಳಿದರು.

ವೇದಿಕೆ ಕಾರ್ಯಕ್ರಮ ಆರಂಭಕ್ಕೂ ಮುನ್ನ 2003ರಲ್ಲಿ ಕಲಾ ಕಾಲೇಜಿನ ವಿದ್ಯಾರ್ಥಿ ಇಂದ್ರಕುಮಾರ್ ನಿರ್ಮಿಸಿದ್ದ ಸರಸ್ವತಿ ಪ್ರತಿಮೆಗೆ ಕುಲಪತಿ ಹಾಗೂ ಅತಿಥಿಗಳು ಪುಷ್ಪ ಅರ್ಪಿಸಿದರು. ಬಳಿಕ 2006ರಲ್ಲಿ ಕಾಲೇಜಿನ ವಿದ್ಯಾರ್ಥಿಗಳೇ ಸ್ವಂತ ಖರ್ಚಿನಲ್ಲಿ ನಿರ್ಮಿಸಿರುವ ಜಿರಾಫೆ ಪ್ರತಿರೂಪಗಳ ಕಂಚಿನ ಪ್ರತಿಮೆಯನ್ನು ಕುಲಪತಿ ಪ್ರೊ.ಬಿ.ಡಿ.ಕುಂಬಾರ ಅನಾವರಣಗೊಳಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ 2007ನೇ ಸಾಲಿನ ವಿದ್ಯಾರ್ಥಿಗಳಿಂದ ಬ್ರಾಂಡಿಂಗ್ ಮತ್ತು ಡಿಜಿಟಲ್ ಮಾರ್ಕೆಟಿಂಗ್, ಯುಐ/ಯುಎಕ್ಸ್ ಡಿಸೈನಿಂಗ್, ಶಿಲ್ಪಕಲೆ, ವಿಎಫ್‌ಎಕ್ಸ್ ಪ್ರೊಡಕ್ಷನ್ ಕುರಿತು ಪ್ರಾತ್ಯಾಕ್ಷಿಕೆ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು. 

ಪ್ರಿನ್ಸಿಪಾಲ್ ಡಾ.ಜೈರಾಜ್ ಚಿಕ್ಕಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು, 2007ನೇ ಸಾಲಿನ ವಿದ್ಯಾರ್ಥಿಗಳಾದ ಡಿ.ಪಿ.ಪವನ್, ಕೆ.ವಿರಾಕೇಶ್, ಐಕ್ಯುಎಸಿ ಸಂಯೋಜನಾಧಿಕಾರಿ ಸತೀಶ್‌ಕುಮಾರ್ ಪಿ. ವಲ್ಲೇಪುರೆ ಇತರರಿದ್ದರು.

error: Content is protected !!