ಸಾಮರಸ್ಯ, ಸಹಬಾಳ್ವೆ, ಕೂಡಿ ಬಾಳುವ ಸಂಸ್ಕೃತಿ ಹೆಚ್ಚಲಿ

ಸಾಮರಸ್ಯ, ಸಹಬಾಳ್ವೆ, ಕೂಡಿ ಬಾಳುವ ಸಂಸ್ಕೃತಿ ಹೆಚ್ಚಲಿ

ಸಾರ್ವಜನಿಕ ಸೇವಾ ಸಮಿತಿಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ

ದಾವಣಗೆರೆ, ಡಿ. 9- ಸಮಾಜದ ಸ್ವಾಸ್ಥ್ಯ ಕದಡುವ ಜನರ ಬಗ್ಗೆ ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ.  ಸಾಮರಸ್ಯ, ಸಹಬಾಳ್ವೆ ಮತ್ತು ಕೂಡಿ ಬಾಳುವ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕಾಗಿದೆ. ಸರ್ವ ಸಮುದಾಯದವರು ಒಟ್ಟಾಗಿ ಕನ್ನಡದ ಹಬ್ಬ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.

ವಿನೋಬನಗರದ ಎರಡನೇ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ 26 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜವಾಹರಲಾಲ್ ನೆಹರು ಮತ್ತು ಮಹಾತ್ಮಾ ಗಾಂಧೀಜಿ ಅವರು ಸದೃಢ ಭಾರತ ನಿರ್ಮಾಣ ಮಾಡುವಲ್ಲಿ ಅವಿರತ ಶ್ರಮಿಸಿದ ವರು. ಭಾರತೀಯರ ಭವಿಷ್ಯ ರೂಪಿಸಿದವರು. ದೇಶ ಮತ್ತು ಜನರಿಗಾಗಿ ನೆಹರು ಮತ್ತು ಗಾಂಧಿ ಮಾಡಿರುವ ತ್ಯಾಗ ಭಾರತದ ಇತಿಹಾಸದಲ್ಲಿ ಅಪ್ರತಿಮವಾಗಿದೆ ಎಂದರು.

ಮಹಾನಗರ ಪಾಲಿಕೆ ಮೇಯರ್
ಕೆ. ಚಮನ್ ಸಾಬ್ ಮಾತನಾಡಿ, ಸರ್ವ ಧರ್ಮೀಯರೂ ಒಟ್ಟಾಗಿ ಸೇರಿ ಸಡಗರ, ಸಂಭ್ರಮದಿಂದ ಆಚರಿಸುವ ಏಕೈಕ ಹಬ್ಬ ಅದುವೇ `ಕನ್ನಡ  ಹಬ್ಬ’ ಎಂದು ಹೆಮ್ಮೆಯಿಂದ ಹೇಳಿಕೊಂಡ ಅವರು, `ನಾನು ಬದುಕ ಬೇಕು- ಇತರರನ್ನು ಬದುಕಲು ಬಿಡಬೇಕು’ ಎಂಬ ತತ್ವದ ಆಧಾರದ ಮೇಲೆ ಸೌಹಾರ್ದತೆಯ, ಸಾಮರಸ್ಯದ ಬದುಕು ನಮ್ಮೆಲ್ಲರದ್ದಾಗಬೇಕೆಂದು ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಒಡೆದಾಳುವ ನೀತಿ ಹೆಚ್ಚಾಗುತ್ತಿದ್ದು, ಪ್ರಶ್ನೆ ಮಾಡುವ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದ್ವೇಷ ತುಂಬಿಕೊಂಡವರು, ಸಾಮ್ರಾಜ್ಯವನ್ನಾಳಿದವರು ಹೆಚ್ಚು ದಿನ ನೆನಪಿನಲ್ಲಿ ಉಳಿಯಲಾರರು. ಆದರೆ ತ್ಯಾಗ ಮನೋಭಾವನೆ, ನಿಸ್ವಾರ್ಥ ಸೇವೆ ಮಾಡಿದ ಬುದ್ಧ, ಬಸವ, ಮಹಾವೀರ, ಅಂಬೇಡ್ಕರ್, ಮಹಮದ್ ಪೈಗಂಬರ್, ಬಸವಣ್ಣ ಮುಂತಾದವರು ಪ್ರಾತಃಸ್ಮರಣೀಯರಾಗಿ ಎಲ್ಲರ ಮನದಲ್ಲಿದ್ದಾರೆ ಎಂದರು.

ಉಪ ಮೇಯರ್ ಸೋಗಿ ಶಾಂತಕುಮಾರ್ ಮಾತನಾಡಿದರು. ಸಾರ್ವಜನಿಕ ಸೇವಾ ಸಮಿತಿ ಅಧ್ಯಕ್ಷ ಎ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. 

ಕಾಂಗ್ರೆಸ್ ಮುಖಂಡ ಎಸ್. ಮಲ್ಲಿಕಾರ್ಜುನ್, ಮಹಾನಗರ ಪಾಲಿಕೆ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸವಿತಾ ಗಣೇಶ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ್, ವರ್ತಲ ಅಜ್ಮತ್‌ವುಲ್ಲಾ, ನಾಗರಾಜ್ ಕೆ. ರಾಯ್ಕರ್ (ಶಿಕಾರಿಪುರ), ಸುರೇಶ್, ರಾಮಚಂದ್ರ ರಾಯ್ಕರ್, ಶಿವಾಜಿರಾವ್ ಯಶವಂತ್, ರಮೇಶ್, ರವಿ ಸೇರಿದಂತೆ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಖುಷಿ ರಾಯ್ಕರ್, ಶ್ರೇಯಸ್‌ ಪ್ರಭು ಆಚಾರ್, ತಿಮ್ಮಕ್ಕ ವೆಂಕಟೇಶ್, ಕಾರ್ತಿಕ್ ಸಿ. ಅಂಗಡಿ, ಪದ್ಮಶ್ರೀ, ಪ್ರಿಯಾಂಕ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

error: Content is protected !!