ಜಗಳೂರಿನಲ್ಲಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ
ಜಗಳೂರು, ಡಿ. 8 – ರಾಜನಹಳ್ಳಿ ಮಠದಲ್ಲಿ ಫೆ. 8 ಮತ್ತು 9 ರಂದು ನಡೆಯಲಿರುವ 7ನೇ ಮಹರ್ಷಿ ವಾಲ್ಮೀಕಿ ಜಾತ್ರೆಗೆ ತಾಲ್ಲೂಕಿನಿಂದ ಸಮಾಜದ ಬಂಧುಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ, ಯಶಸ್ವಿಗೊಳಿಸುವಂತೆ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮೀಜಿ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ 7ನೇ ವಾಲ್ಮೀಕಿ ಜಾತ್ರೆಯ ಅಂಗವಾಗಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಒಕ್ಕಲಿಗ, ಲಿಂಗಾಯತ ಸೇರಿದಂತೆ ಸಹೋದರ ಸಮುದಾಯಗಳ ಒಗ್ಗಟ್ಟು, ಸ್ವಾಭಿ ಮಾನ, ಶೋಷಿತ ವರ್ಗಗಳಿಗೆ ಮಾದರಿಯಾಗ ಬೇಕು. ಅಂಬೇಡ್ಕರ್ ಅವರ ಸಂವಿಧಾನ ಬದ್ದ ಹಕ್ಕುಗಳಿಗೆ ಸಂಘಟಿತ ಹೋರಾಟ ಅನಿವಾರ್ಯ ವಾಗಿದೆ. ಆದ್ದರಿಂದ ವಾಲ್ಮೀಕಿ ಜಾತ್ರೆಯನ್ನು ಸಾಂಸ್ಕೃತಿಕ ಹಬ್ಬವನ್ನಾಗಿಸಿ, ವೈಚಾರಿಕ, ಜನಜಾಗೃತಿ ಮೂಡಿಸುವ ಮೂಲಕ ಪಕ್ಷಾತೀತವಾಗಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಅಧಿವೇಶನದಲ್ಲಿ ಬೇಡಿಕೆಗಳನ್ನು ಈಡೇರಿಸಲು ಹಕ್ಕೊತ್ತಾಯಿಸಲಾಗುವುದು. ಎಸ್.ಟಿ. ಮೀಸಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರಿಗೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಮತ ಬ್ಯಾಂಕ್ಗಾಗಿ ಬಳಕೆ, ನಮ್ಮನಾಳುವ ಆಡಳಿತ ಸರ್ಕಾರಗಳು ಶೋಷಿತ ಸಮುದಾಯಗಳ ಹೋರಾಟಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವುದಲ್ಲದೆ. ಕೇವಲ ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಎಲ್ಲಾ ಪಕ್ಷಗಳು ಕೇವಲ ಮತ ಬ್ಯಾಂಕ್ಗಾಗಿ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ,’ರಾಜನಹಳ್ಳಿ ಮಠದಲ್ಲಿ ನಡೆದ 4ನೇ ವಾಲ್ಮೀಕಿ ಜಾತ್ರೆ ಅಧ್ಯಕ್ಷನಾಗಿ ಯಶಸ್ಸಿಗೆ ಕಾರಣವಾಗಿರುವೆ. ನನ್ನ ಆಡಳಿತಾವಧಿಯಲ್ಲಿಯೂ ಸದಾ ಸಹಕರಿಸಿರುವೆ.ಕ್ಷೇತ್ರದಲ್ಲಿ ಬಡತನವಿದ್ದರೂ ತಮ್ಮಿಂದ ಸಾಧ್ಯವಿರುವಷ್ಟು ದೇಣಿಗೆಯೊಂದಿಗೆ ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಹೃದಯ ಶ್ರೀಮಂತಿಕೆಯಿದೆ.ತರಳಬಾಳು ಹುಣ್ಣಿಮೆ ಕಾರ್ಯಕ್ರಮ ಮಾದರಿಯಾಗಬೇಕು ಎಂದು ಹೇಳಿದರು.
ಇದೇ ವೇಳೆ ವಾಲ್ಮೀಕಿ ಜಾತ್ರೆಯ ಭಿತ್ತಿ ಚಿತ್ರ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ , ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಬಡಯ್ಯ, ಕಾರ್ಯದರ್ಶಿ ವಕೀಲ ತಿಪ್ಪೇಸ್ವಾಮಿ, ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಮರೇನಹಳ್ಳಿ ಬಸವರಾಜ್, ಮುಖಂಡ ಬಿ. ಲೋಕೇಶ್, ಬಿಸ್ತುವಳ್ಳಿ ಬಾಬು, ರೇವಣ್ಣ, ತಿಮ್ಮಣ್ಣ, ನಿಜಲಿಂಗಪ್ಪ, ಸಿದ್ದಪ್ಪ, ನಾಗರಾಜ್, ಸಾವಿತ್ರಮ್ಮ, ಮಲ್ಲಿಕಾರ್ಜುನ್, ಪಾಪಲಿಂಗಪ್ಪ , ಕೃಷ್ಣಪ್ಪ ಇದ್ದರು.