ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆ ಮೈಗೂಡಿಸಿಕೊಳ್ಳಿ

ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆ ಮೈಗೂಡಿಸಿಕೊಳ್ಳಿ

ಜಗಳೂರಿನ ಕಾರ್ಯಕ್ರಮದಲ್ಲಿ ಯುವ ಪೀಳಿಗೆ ಶಾಸಕ ಬಿ.ದೇವೇಂದ್ರಪ್ಪ ಕರೆ

ಜಗಳೂರು, ಡಿ.6- ಇಂದಿನ ಯುವಪೀಳಿಗೆ ಬುದ್ದ, ಬಸವ, ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಸಮಾಜದಲ್ಲಿ ಜಾಗೃತಿ ಮೂಡಿಸುವ ಅನಿವಾರ್ಯತೆಯಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಿಎಸ್‌ಎಸ್ ಹಾಗೂ ಮಾನವ ಬಂಧುತ್ವ ವೇದಿಕೆ, ಪ್ರಗತಿ ಪರ ಸಂಘಟನೆಗಳ  ಸಹಯೋಗದಲ್ಲಿ ಹಮ್ಮಿಕೊಂಡಿದ್ದ  ಅಂಬೇಡ್ಕರ್ ಅವರ 68 ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಮನುವಾದಕ್ಕೆ ಅಂತ್ಯವಾಡಿದ ಸಂವಿಧಾನದ ಕರ್ತೃ ಡಾ.ಬಿ.ಆರ್ ಅಂಬೇಡ್ಕರ್ ಅವರ ಆಶಯಗಳು ಸಾರ್ವಕಾಲಕ್ಕೂ  ಜೀವಂತ. ಅಂಬೇಡ್ಕರ್ ಅವರ ದೇಹ ದೂರವಾದರೂ ಜ್ಞಾನ ಭಂಡಾರ ನಮಗೆ ಆದರ್ಶವಾಗಿದೆ ಎಂದರು‌‌.

ಸಚಿವ ಸತೀಶ್ ಜಾರಕಿಹೊಳಿ ಅವರ ನೇತೃತ್ವದ ಮಾನವ ಬಂಧುತ್ವ ವೇದಿಕೆ ಯಡಿಯಲ್ಲಿ ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಲು ತಾಲೂಕಿನಲ್ಲಿ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

ಜಿ.ಪಂ. ಮಾಜಿ ಸದಸ್ಯ  ಕೆ.ಪಿ.ಪಾಲಯ್ಯ ಮಾತನಾಡಿ, ಅಂಬೇಡ್ಕರ್  ಅವರ ಪರಿನಿರ್ವಾಣ ಕಾರ್ಯಕ್ರಮದ ಅಂಗವಾಗಿ ಸಚಿವ ಸತೀಶ್ ಜಾರಕಿಹೊಳಿ  ಅವರ ನೇತೃತ್ವದ ಸ್ಮಶಾನ ವಾಸ್ತವ್ಯ ಕಾರ್ಯಕ್ರಮಗಳು ಅಂಬೇಡ್ಕರ್ ವಿಚಾರಧಾರೆಗಳನ್ನು ಸಮಾಜಕ್ಕೆ ಪರಿಚಯಿಸುವ  ಮೂಲಕ  ಸಂವಿಧಾನದ ಆಶಯಗಳನ್ನು ಸಕಾರಗೊಳಿಸಲಾಗುತ್ತಿವೆ. ಮನುವಾದಿಗಳು ಸರ್ಕಾರಿ ಸ್ವಾಮ್ಯದ ಇಲಾಖೆಗಳನ್ನು ಖಾಸಗೀರಣಗೊಳಿಸುವ ಮೂಲಕ ಸಂವಿಧಾನ ಬದ್ದ ಮೀಸಲಾತಿಗೆ ಕೊಡಲಿ ಪೆಟ್ಟು ತರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.

ವಕೀಲ ಸಂಘದ ತಾಲೂಕು ಘಟಕದ ಅಧ್ಯಕ್ಷ ಟಿ. ಬಸವರಾಜ್  ಮಾತನಾಡಿ, ರಾಜಪ್ರಭುತ್ವ ವ್ಯವಸ್ಥೆಯಲ್ಲಿ ಬಂಡವಾಳ ಶಾಹಿಗಳಿಗೆ ಸೀಮಿತವಾಗಿದ್ದ ಮತದಾನದ ಹಕ್ಕನ್ನು ಸಾರ್ವತ್ರೀಕರಣಗೊಳಿಸಿದ ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಮನಸ್ಥಿತಿ ಬದಲಾಗಬೇಕು ಎಂದರು.

ಡಿಎಸ್‌ಎಸ್ ಮುಖಂಡ ಜಿ.ಎಸ್.ಶಂಭುಲಿಂಗಪ್ಪ ಮಾತನಾಡಿ, ಅಸ್ಪೃಶ್ಯತೆ ವಿಜೃಂಭಣೆ ಅನುಭವಿಸಿ ಸಂವಿಧಾನ ರಚಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ  ಶೋಷಿತ ವರ್ಗಕ್ಕೆ ಬೆಳಕಾಗಿದ್ದಾರೆ. ಆದರೆ ಇಂದಿಗೂ ಕೆಲ ರಾಜಕೀಯ ಹಿತಾಸಕ್ತಿಯಿಂದ ಜಾತಿ ವ್ಯವಸ್ಥೆ ತಾಂಡವಾಡುತ್ತಿರುವುದು ಶೋಚನೀಯ ಸ್ಥಿತಿ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ಪ.ಪಂ‌.ಅಧ್ಯಕ್ಷ ನವೀನ್ ಕುಮಾರ್, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ,ತಾ.ಪಂ. ಇಓ ಕೆಂಚಪ್ಪ, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪಿಐ ಶ್ರೀನಿವಾಸ್ ರಾವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಸಿಡಿಪಿಓ ಬೀರೇಂದ್ರಕುಮಾರ್, ತಾಲೂಕು ನಾಯಕ ಸಮಾಜದ ಕಾರ್ಯದರ್ಶಿ ವಕೀಲ ತಿಪ್ಪೇಸ್ವಾಮಿ, ಮುಖಂಡರಾದ ಬಿ.ಮಹೇಶ್ವರಪ್ಪ, ಪಲ್ಲಾಗಟ್ಟೆ ಶೇಖರಪ್ಪ, ಕುಬೇಂದ್ರಪ್ಪ, ರಂಗಪ್ಪ, ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್, ಚಂದ್ರಪ್ಪ, ಹನುಮಂತಾಪುರ ಸತೀಶ್, ಸತ್ಯಮೂರ್ತಿ, ಓಬಣ್ಣ ಸೇರಿದಂತೆ ಇತರರು ಇದ್ದರು.

error: Content is protected !!