ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಹಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ
ದಾವಣಗೆರೆ, ಡಿ. 6- ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳು, ಜೀವನ ಚರಿತ್ರೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿದಾಗ ಮಾತ್ರ ಪ್ರತಿಯೊಬ್ಬರಿಗೂ ಅಂಬೇಡ್ಕರ್ ಅರ್ಥವಾಗಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಗಾಂಧಿನಗರದಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ದಲಿತ ಸಂಘರ್ಷ ಸಮಿತಿ, ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಹಣಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸನಾತನ ವ್ಯವಸ್ಥೆಯಲ್ಲಿ ಶ್ರೇಷ್ಠ-ಕನಿಷ್ಠ ಎಂಬುದನ್ನು ಸಮಾಜದಲ್ಲಿ ಬಿತ್ತಿದ್ದು, ಹುಟ್ಟಿನಿಂದ ಯಾವುದೂ ಶ್ರೇಷ್ಠ, ಕನಿಷ್ಠ ಅಲ್ಲ. ಮೌಢ್ಯಾಚರಣೆಗಳನ್ನು ತಡೆಯುವ ಸಲುವಾಗಿ ಸ್ಮಶಾನದಲ್ಲಿ ಇಂತಹ ಕಾರ್ಯಕ್ರಮಗಳನ್ನು ಇಡೀ ರಾಜ್ಯಾದ್ಯಂತ ಮಾನವ ಬಂಧುತ್ವ ವೇದಿಕೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸಂವಿಧಾನ ಮುಖೇನ ನಾವೆಲ್ಲರೂ ಸಮಾನರು ಎಂದು ಸಾರಿದವರು ಅಂಬೇಡ್ಕರ್. ಈ ಕಾರಣಕ್ಕಾಗಿ ಸನಾತನಿಗಳಿಗೆ ಅಂಬೇಡ್ಕರ್ ಮತ್ತು ಸಂವಿಧಾನ ಬೇಡವಾಗಿದೆ ಎಂದು ಹೇಳಿದರು.
ನಮ್ಮನ್ನು ಗೌರವಿಸುವ ಸಂವಿಧಾನ ಬೇಕೆನ್ನುವವರ ಮನಸ್ಥಿತಿ ಬದಲಾಗಬೇಕಾಗಿದೆ. ದೇಶ ಒಡೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಸಂವಿಧಾನ ಸಮತೆಯ ಹಾಸು ಆಗಿರುವ ಕಾರಣಕ್ಕಾಗಿ ಸನಾತನಿಗಳು, ಕೋಮುವಾದಿಗಳು, ಧರ್ಮಾಂಧರು ಸಂವಿಧಾನದ ಮೇಲೆ, ಅಂಬೇಡ್ಕರ್ ವಿಚಾರಗಳು, ವಿಚಾರವಾದಿಗಳ ಹಲ್ಲೆ ಮಾಡುತ್ತಿದ್ದು, ಅಂಬೇಡ್ಕರ್ ಅಧ್ಯಯನ ಕೇಂದ್ರಗಳ ಮೇಲೆ ದಾಳಿ ಮಾಡಲಾಗುತ್ತಿದೆ ಎಂದರು.
ಅಂಬೇಡ್ಕರ್ ಚಿಂತನೆಗಳನ್ನು ನಾಶಗೊಳಿಸಿದರೆ ಈ ದೇಶವನ್ನು ಮತ್ತೆ ಸನಾತನದ ಕಡೆ ಹೊತ್ತಯ್ಯಬಹುದು ಎಂಬ ದೊಡ್ಡ ಕಲ್ಪನೆಯಲ್ಲಿದ್ದಾರೆ. ನಾವೆಲ್ಲರೂ ಸೌಹಾರ್ದತೆ ಭಾರತ ಕಟ್ಟಬೇಕಾದರೆ, ಬಹುತ್ವ ಭಾರತ ಜೀವಂತ ಉಳಿಸಲು ಅಂಬೇಡ್ಕರ್ ಚಿಂತನೆಗಳು, ಹೋರಾಟ ಅನಿವಾರ್ಯ ಎಂದು ಹೇಳಿದರು.
ನಾವೆಲ್ಲರೂ ಒಟ್ಟುಗೂಡಬೇಕಾಗಿದೆ. ಇಂತಹ ಚಿಂತನೆಗಳನ್ನು ಮೂಡಿಸಬೇಕಾಗಿದೆ. ಮನುಷ್ಯ ಮನುಷ್ಯರಲ್ಲಿನ ಸಂಬಂಧ ಬೆಸೆಯುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಬಹಳ ವರ್ಷಗಳಿಂದ ಮಾಡುತ್ತಾ ಬಂದಿದೆ. ಸಂವಿಧಾನ ಉಳಿಸುವ ಮತ್ತು ವಾಸ್ತವೀಕರಿಸುವ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಡಾ. ದಾದಾಪೀರ್ ನವಿಲೇಹಾಳ್ ಮಾತನಾಡಿ, ಅಂಬೇಡ್ಕರ್ ನಂತರದ ಭಾರತ ಕುರಿತು ಬಹಳ ದೊಡ್ಡ ಅಧ್ಯಯನಗಳಾಗಬೇಕಾದ ಅವಶ್ಯಕತೆ ಇದೆ. ಗಾಂಧಿ ನಂತರದ ಮತ್ತು ನೆಹರು ನಂತರದ ಭಾರತದ ಅಧ್ಯಯನ ಕುರಿತು ಸಂಶೋಧನೆಗಳಾಗಿವೆ. ಆದರೆ ಅಂಬೇಡ್ಕರ್ ನಂತರದ ಭಾರತದ ಬಗ್ಗೆ ಸಮಗ್ರವಾದ ಸಂಶೋಧನೆಗಳಾಗಬೇಕಾಗಿದೆ ಎಂದರು.
ಸರ್ಕಾರಿ, ಖಾಸಗಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ರೀತಿಯ ಅಧ್ಯಯನ, ಸಂಶೋಧನೆಗಳನ್ನು ಮಾಡಬೇಕಾದ ಅಗತ್ಯವಿದೆ. ಎಷ್ಟೇ ಬಲಿಷ್ಠವಾದ ಸಂವಿಧಾನ, ವಿಶಾಲವಾದ ಮೌಲ್ಯಗಳಿದ್ದರೂ ಸಹ ಒಬ್ಬ ಕೆಟ್ಟ ಆಡಳಿತಗಾರನ ಕೈಯಲ್ಲಿ ಅಧಿಕಾರ ಸಿಕ್ಕರೆ ಎಲ್ಲವೂ ನಿಷ್ಪ್ರಯೋಜಕವಾಗಲಿದೆ ಎಂದು ಹೇಳಿದರು.
ಸಂವಿಧಾನಕ್ಕೆ ಅನೇಕ ತಿದ್ದುಪಡಿಗಳಾಗಿವೆ. ಕಾಲ ಕಾಲಕ್ಕೆ ಸೇರ್ಪಡೆ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ. ಕಳೆದ ಹತ್ತು ವರ್ಷಗಳಿಂದ ಸಂವಿಧಾನ ದುರ್ಬಲಗೊಳಿಸುವ ವಾಮಮಾರ್ಗವನ್ನು ಇವತ್ತಿನ ಸರ್ಕಾರಗಳು ಮಾಡುತ್ತಿವೆ ಎಂದು ವಿಷಾದಿಸಿದರು.
ಅಂಬೇಡ್ಕರ್ ಓದಿನ ಮೂಲಕ ಒಳದನಿಯಾಗಬೇಕಾಗಿದೆ. ಅಂಬೇಡ್ಕರ್ ಪುಸ್ತಕಗಳನ್ನು ನಿರಂತರ ಅಧ್ಯಯನಗಳಾಗಬೇಕಾಗಿದೆ. ಓದಿನ ಮೂಲಕವೇ ಹೊಸದೊಂದು ಆಲೋಚನಾ ಕ್ರಮವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಶಿಕ್ಷಣವನ್ನು ಸಾಧನವನ್ನಾಗಿ ಬಳಸಿದ್ದರು. ಆದರೆ ಇಂದಿನ ರಾಜಕಾರಣಿಗಳು ಶಿಕ್ಷಣವನ್ನು ಆಯುಧವನ್ನಾಗಿ ಬಳಕೆ ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದರು.
ವಿವಿಧ ಸಂಘಟನೆಗಳ ಪ್ರಮುಖರುಗಳಾದ ಆವರಗೆರೆ ರುದ್ರಮುನಿ, ರುದ್ರಗೌಡ್ರು, ಹೆಚ್.ಸಿ. ಗುಡ್ಡಪ್ಪ, ಸತೀಶ ಅರವಿಂದ್, ಕತ್ತಲಗೆರೆ ತಿಪ್ಪಣ್ಣ, ಅನಿಸ್ ಪಾಷಾ ಅಂಬೇಡ್ಕರ್ ಜೀವನ, ಸಾಧನೆ, ಆದರ್ಶಗಳ ಕುರಿತು ಮಾತನಾಡಿದರು.
ಹನುಮಂತಪ್ಪ, ಲಕ್ಷ್ಮಣ್, ಮಾಡಾಳು ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.