ನಂದಿಗುಡಿ ಬೃಹನ್ಮಠದ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮೆಚ್ಚುಗೆ
ಮಲೇಬೆನ್ನೂರು, ಡಿ. 8- ನೊಳಂಬ ವೀರಶೈವ ಸಮಾಜ ಸ್ವಾಭಿಮಾನಕ್ಕೆ ಹೆಸರಾಗಿದ್ದು, ಯಾರ ಹಂಗಿಲ್ಲದೆ ಬದುಕುತ್ತಿರುವ ಸಮಾಜವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಂದಿಗುಡಿ ಬೃಹನ್ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಗುರು ಕೆಂಚವೀರೇಶ್ವರ ಮಹಾ ಶಿವಯೋಗಿಗಳವರ ಪುಣ್ಯ ಸಂಸ್ಮರಣೆ ಮಹೋತ್ಸವ ಮತ್ತು ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 15 ನೇ ವರ್ಷದ ಸೂರ್ಯ ಸಿಂಹಾಸನಾರೋಹಣ ಸಮಾರಂಭ ಹಾಗೂ ಶ್ರೀ ನಂದಿ ನೊಳಂಬ ಸ್ತ್ರೀ ಶಕ್ತಿ ಸಂಘಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.
ಈ ಸಮಾಜದಲ್ಲಿ ಬಡವರಿದ್ದರೂ ಶ್ರೀಮಂತ ಹೃದಯ ಹೊಂದಿದ್ದಾರೆ. ರಾಜಕೀಯದಲ್ಲಿ ನಂಬಿದವರಿಗೆ ಶಕ್ತಿ ತುಂಬುವ ಈ ಸಮಾಜಕ್ಕೆ ಸರ್ಕಾರದ ಅಗತ್ಯ ಸೌಲಭ್ಯಗಳು ಇದುವರೆಗೂ ಸಿಕ್ಕಿಲ್ಲ ಎಂಬ ವಿಷಯ ತಿಳಿದು ಬೇಸರವಾಯಿತು. ಸಮ ಸಮಾಜದ ಕನಸು ಕಂಡ ಬಸವಣ್ಣನವರ ಹಾದಿಯಲ್ಲಿ ಮಠದ ಶ್ರೀಗಳು ಎಲ್ಲಾ ಸಮಾಜಗಳ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಮಾಜ ಹಾಗೂ ನಂದಿಗುಡಿ ಮಠದ ಅಭಿವೃದ್ಧಿಗೆ ಗಮನಹರಿಸುವುದಾಗಿ ಭರವಸೆ ನೀಡಿದ ವಿಜಯೇಂದ್ರ ಅವರು, ಈ ನಾಡಿನಲ್ಲಿ ಎಲ್ಲಾ ವರ್ಗಗಳ ಜನರ ಪರವಾಗಿ ನಿರಂತರ ಕೆಲಸ ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಎಲ್ಲಾ ವರ್ಗಗಳ ಏಳಿಗೆಗೆ ಸ್ಪಂದಿಸುವುದರ ಜೊತೆಗೆ ವೀರಶೈವ ಮಠಗಳಲ್ಲದೇ ಹಿಂದುಳಿದ, ದಲಿತ ಮಠಗಳ ಅಭಿವೃದ್ಧಿಗೂ ಸರ್ಕಾರದಿಂದ ಸಾಕಷ್ಟು ನೆರವು ನೀಡಿದ್ದನ್ನು ರಾಜ್ಯದ ಜನ ಮರೆತಿಲ್ಲ ಎಂದರು.
ಶ್ರೀಗಳ ಕ್ಷಮೆ ಕೇಳಿದ ವಿಜಯೇಂದ್ರ
ನಂದಿಗುಡಿ ಮಠದ ಕಾರ್ಯಕ್ರಮಕ್ಕೆ 2 ಗಂಟೆಗೆ ಬರುವುದಾಗಿ ಹೇಳಿದ್ದೆ, ಆದರೆ ಶಿಕಾರಿಪುರದಲ್ಲಿ ಕೊಪ್ಪಳ ಶ್ರೀಗಳ ಕಾರ್ಯಕ್ರಮ ಇದ್ದ ಕಾರಣ ಅದನ್ನು ಮುಗಿಸಿಕೊಂಡು ಬರುವ ಮಾರ್ಗ ಮಧ್ಯೆ ಅಲ್ಲಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಸ್ವಾಗತ, ಬೈಕ್ ರಾಲಿ ಮಾಡಿದ್ದರಿಂದ ತಡವಾಗಿ ಬಂದಿದ್ದೇನೆ ಎಂದು ವಿಜಯೇಂದ್ರ ಅವರು ಶ್ರೀಗಳಲ್ಲಿ ಮತ್ತು ಭಕ್ತರಲ್ಲಿ ಕ್ಷಮೆ ಕೇಳಿದರು.
2-3 ತಾಸು ತಡವಾಗಿ ಬಂದಿದ್ದರೂ ನನ್ನ ಹಾಗೂ ಯಡಿಯೂರಪ್ಪ ಅವರ ಮೇಲಿನ ಅಭಿಮಾನಕ್ಕಾಗಿ ನೀವು ತಾಳ್ಮೆಯಿಂದ ಕಾದು ಕುಳಿತಿರುವುದಕ್ಕೆ ನಾವು ಸದಾ ಆಭಾರಿಯಾಗಿದ್ದೇನೆಂದು ವಿಜಯೇಂದ್ರ ಅವರು ಭಾವನಾತ್ಮಕವಾಗಿ ಮಾತನಾಡಿ, ಅಭಿಮಾನಿಗಳನ್ನು ಸಮಾಧಾನಪಡಿಸಿದರು. ಸಮಯ ಪರಿಪಾಲನೆ ನಮ್ಮ ಆದ್ಯ ಕರ್ತವ್ಯವಾಗಿದ್ದು, ಇನ್ನೆಂದೂ ಈ ರೀತಿ ಆಗದಂತೆ ನಡೆದುಕೊಳ್ಳುತ್ತೇನೆಂದು ವಿಜಯೇಂದ್ರ ಶ್ರೀಗಳಿಗೆ ಮಾತುಕೊಟ್ಟರು.
ಮಠ-ಮಾನ್ಯಗಳಿಂದ ಸಮಾಜವನ್ನು ತಿದ್ದುವ ಕೆಲಸ ಆದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಆ ಕಾರಣಕ್ಕೆ ಜನರು ಮಠಗಳಿಗೆ ವಿಶೇಷ ಗೌರವ ಕೊಡುತ್ತಾ ಬಂದಿದ್ದಾರೆ. ಸ್ವಾರ್ಥಕ್ಕಾಗಿ ಸಮಾಜ ಸಮಾಜಗಳ ನಡುವೆ ಕಲಹ ಉಂಟು ಮಾಡುವವರ ಬಗ್ಗೆ ಜನ ಜಾಗೃತರಾಗಿರಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಗುರು-ಹಿರಿಯರ ಬಗ್ಗೆ ಮತ್ತು ದೇಶಾಭಿಮಾನ ಬೆಳೆಸುವ ಸಂಸ್ಕಾರ ಬೆಳೆಸಬೇಕೆಂದು ವಿಜೆಯೇಂದ್ರ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು, ನಮ್ಮ ಸಮಾಜದವರು ಸ್ವತಂತ್ರ ಜೀವಿಗಳಾಗಿದ್ದು, ಯಾರ ಹಂಗಿನಲ್ಲೂ ನಾವಿಲ್ಲ. ನಮ್ಮ ಜನ ರೈತಾಪಿಗಳಾಗಿದ್ದು, ಸ್ವಾಭಿಮಾನದ ಸಂಕೇತವಾಗಿದ್ದಾರೆ.
ನಿಮ್ಮ ತಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನಮ್ಮ ಮಠಕ್ಕೆ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ಆ ಬಗ್ಗೆ ನಮಗೆ ಬೇಸರವೂ ಇಲ್ಲ ಎಂದ ಸ್ವಾಮೀಜಿ ಅವರು, ನೀವು ಕೊಟ್ಟ ಸಮಯಕ್ಕಿಂತ ಬಹಳ ತಡವಾಗಿ ಬಂದಿರುವುದಕ್ಕೆ ಭಕ್ತರು, ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಾಯುವುದು ಮತ್ತು ಕಾಯುಸುವುದು ಎಷ್ಟು ಸರಿ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ನೀವು ಕೂಡ ಮುಂದೊಂದು ದಿನ ಈ ರಾಜ್ಯ ದ ಚುಕ್ಕಾಣಿ ಹಿಡಿಯಲಿದ್ದು, ಈ ಸಮಾಜವನ್ನು ಮರೆಯಬೇಡಿ. ಈ ಸಮಾಜ ರಾಜ್ಯದ 5-6 ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿದ್ದು, ಬೇರೆಯವರ ಹಿತ ಬಯಸುತ್ತಾ ಬಂದಿದೆ. ಅಷ್ಟೇ ಅಲ್ಲ ಬೇರೆಯವರು ಅಧಿಕಾರ ಹಿಡಿಯಲು ಈ ಸಮಾಜ ಶಕ್ತಿ ತುಂಬಿದೆ ಎಂದು ಸ್ವಾಮೀಜಿ ಹೇಳಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಂದಿಗುಡಿ ಮಠ ಮತ್ತು ನೊಳಂಬ ಸಮಾಜ ಶಕ್ತಿ ಕೇಂದ್ರವಾಗಿದ್ದು, ಅನೇಕರಿಗೆ ಅಧಿಕಾರ ಸಿಗಲು ಸಹಕಾರಿಯಾಗಿದೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಡಾಳು ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಶಿಕಾರಿಪುರದ ಬಿ.ಡಿ. ಭೂಕಾಂತ್, ಎಸ್.ಎ. ಹುಡೇದ್, ಅಭಿ ಪಾಟೀಲ್, ಜಿಗಳಿಯ ಡಾ. ನಾಗರಾಜ್, ಪಿ.ಮಹಾಲಿಂಗಪ್ಪ, ಡಿ.ಜಿ.ಕೆಂಚವೀರಯ್ಯ, ಚಂದ್ರೇಗೌಡ ಮತ್ತಿತರರಿದ್ದರು.