`ಉದಯ ರಾಗದಿಂದ ಸಂಧ್ಯಾರಾಗ’ ಕಾರ್ಯಕ್ರಮದಲ್ಲಿ ಆವರಗೊಳ್ಳ ಶ್ರೀ ಅಭಿಮತ
ದಾವಣಗೆರೆ, ಡಿ. 8- ಸಾಹಿತ್ಯ, ಸಂಗೀತ, ಲಲಿತ ಕಲೆಗಳಿಂದ ಕನ್ನಡ ಭಾಷೆ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ. ಇಂತಹ ನೆಲೆಗಟ್ಟಿಗೆ ಶಕ್ತಿ ತುಂಬಿದವರು ತ್ರಿಭಾಷಾ ಪಂಡಿತರಾದ ಲಿ. ಪಂಡಿತ್ ಪುಟ್ಟರಾಜ್ ಕವಿ ಗವಾಯಿಗಳು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಗವಾಯಿಗಳ ಸಂಗೀತ ಸೇವೆಯನ್ನು ಸ್ಮರಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಆರೋಹಿ ಸಂಗೀತ ಕಲಾ ಶಾಲೆ ವತಿಯಿಂದ ಪಂ. ಪುಟ್ಟರಾಜ ಕವಿ ಗವಾಯಿಗಳ ಗುರುವಂದನೆ ಪ್ರಯುಕ್ತ ಹಮ್ಮಿಕೊಂಡಿದ್ದ `ಉದಯ ರಾಗದಿಂದ ಸಂಧ್ಯಾರಾಗ’ ಸಂಗೀತ ಮಹೋತ್ಸವ ಹಾಗೂ ವಾರ್ಷಿಕ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳನ್ನು ಕೇವಲ ಅಂಕ ಗಳಿಕೆಗೆ ಸೀಮಿತಗೊಳಿಸಿ ಅವರನ್ನು ಪೋಷಿಸುವ ಒಂದು ವರ್ಗ ಇದ್ದರೆ ಸಂಗೀತ, ಸಂಸ್ಕೃತಿ, ಸಾಹಿತ್ಯವನ್ನು ಪರಿಚಯಿಸುವ ಮತ್ತೊಂದು ವರ್ಗ ಕೂಡ ಇಲ್ಲಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸನಾತನ ಭಾರತೀಯ ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತಿರುವುದು ಸ್ತುತ್ಯಾರ್ಹ ಎಂದರು.
ವ್ಯಕ್ತಿಯ ಮಾನಸಿಕ ತೊಂದರೆ, ವೇದನೆಗಳನ್ನು ನಿವಾರಿಸಿಕೊಳ್ಳಲು ಸಂಗೀತ ದಿವ್ಯೌಷಧಿಯಾಗಿದೆ. ಮಕ್ಕಳಿಗೆ ಕೇವಲ ಓದು ಅಷ್ಟೇ ಮುಖ್ಯವಲ್ಲ. ಅದರೊಟ್ಟಿಗೆ ಸಾಹಿತ್ಯ, ಸಂಗೀತ, ಲಲಿತ ಕಲೆಗಳನ್ನು ಕಲಿಸುವ ಮೂಲಕ ಪ್ರೋತ್ಸಾಹಿಸುತ್ತಿರುವವರು ಪ್ರಜ್ಞಾವಂತ ಪೋಷಕರು ಎಂದು ಪ್ರಶಂಸಿಸಿದರು.
ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಸಾಹಿತ್ಯ ಮತ್ತು ಸಂಗೀತ ಎರಡು ಶಕ್ತಿಗಳಿದ್ದಂತೆ. ಇವುಗಳು ಕನ್ನಡ ಭಾಷೆಯನ್ನು ಅತ್ಯಂತ ಎತ್ತರಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕನ್ನಡಕ್ಕೆ ಗಟ್ಟಿತನ ತಂದ ಕನ್ನಡದ ರಸಋಷಿಗಳೆಂದರೆ ಪಂ.ಪುಟ್ಟರಾಜ ಕವಿ ಗವಾಯಿ ಮತ್ತು ಪಂಚಾಕ್ಷರಿ ಗವಾಯಿಗಳು. ಈ ಇಬ್ಬರು ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅನನ್ಯವಾದುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್ಪಿ ರುದ್ರೇಶ್ ಉಜ್ಜಿನಿಕೊಪ್ಪ ಮಾತನಾಡಿ, ಅರಮನೆಯಲ್ಲಿದ್ದ ಸಂಗೀತವನ್ನು ಸಾರ್ವಜನಿಕ ಪಡಸಾಲೆಗೆ ತಂದವರು ಪಂಚಾಕ್ಷರಿ ಗವಾಯಿ ಮತ್ತು ಪುಟ್ಟರಾಜ ಕವಿ ಗವಾಯಿಗಳು. ಅವರಿಂದ ಸಂಗೀತ ಕಲಿತ ಶಿಷ್ಯಂದಿರು ದೇಶ- ವಿದೇಶಗಳಲ್ಲಿ ತಮ್ಮ ಕಲಾ ಸೇವೆಯನ್ನು ಮಾಡುತ್ತಿದ್ದಾರೆ. ಇಂದಿನ ತಾಂತ್ರಿಕ ಯುಗದಲ್ಲಿ ನಾವುಗಳೆಲ್ಲರೂ ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎಂಬ ಆತಂಕ ವ್ಯಕ್ತಪಡಿಸಿದರು.
ಮಕ್ಕಳಿಗೆ ಓದಿನ ಜೊತೆಗೆ ಸಂಗೀತವನ್ನು ಕಲಿಸುವ ಅಗತ್ಯವಿದೆ. ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸುವಂತಹ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕಾದ ಅವಶ್ಯವಿದೆ ಎಂದರು.
ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸಂಗೀತ ಮನಸ್ಸಿಗೆ ಮುದ ನೀಡುತ್ತದೆ. ಒತ್ತಡದ ಬದುಕಿಗೆ ಶಾಂತಿ, ನೆಮ್ಮದಿಯನ್ನು ತಂದು ಕೊಡುತ್ತದೆ. ಸಂಗೀತ ಹಾಡುವುದು ಎಷ್ಟು ಮುಖ್ಯವೋ ಅದಕ್ಕಿಂತ ಸಹೃದಯ ಕೇಳುಗರ ಮನಸ್ಸು ಮುಖ್ಯ ಎಂದು ಹೇಳಿದರು.
ಸಂಗೀತ ಔಷಧಿ ಇದ್ದಂತೆ. ಸಂಗೀತ ಕಲಿತ ಮಕ್ಕಳು ಯಾರೂ ಕೂಡ ಸಮಾಜಕ್ಕೆ ಕಂಟಕವಾಗುವುದಿಲ್ಲ. ಸಂಗೀತ ಕೇವಲ ಮನುಷ್ಯರಿಗಷ್ಟೇ ಅಲ್ಲದೇ ಪಶು, ಪಕ್ಷಿ, ಪ್ರಾಣಿಗಳು, ಗಿಡ-ಮರಗಳಿಗೂ ಅವಶ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪನ್ನ ವಿ. ಮುತಾಲಿಕ್, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಸಹಾಯಕ ಪ್ರಾಧ್ಯಾಪಕ ಡಿ. ಆರ್.ನಟರಾಜ್ ಹಿರೇಮಳಲಿ, ಕಲಾವಿದರಾದ ಭೀಮಾಶಂಕರ್ ಬಿದನೂರು, ಶಿವಬಸಯ್ಯ ಚರಂತಿಮಠ, ವೆಂಕಟೇಶ್ ಹಾಲಕೊಡು, ಆರೋಹಿ ಸಂಗೀತ ಕಲಾ ಶಾಲೆ ಅಧ್ಯಕ್ಷ ಆನಂದ ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಶಿವಬಸಯ್ಯಸ್ವಾಮಿ, ಅಮರಯ್ಯಸ್ವಾಮಿ, ಚನ್ನವೀರಸ್ವಾಮಿ, ಅಕ್ಕಮ್ಮ ಹಿರೇಮಠ ಮತ್ತಿತರರನ್ನು ಗೌರವಿಸಲಾಯಿತು.