ಭ್ರಷ್ಟಾಚಾರದ ಗುಂಡಿ ಮುಚ್ಚಲು ಹಾಸನ ಸಮಾವೇಶ

ಭ್ರಷ್ಟಾಚಾರದ ಗುಂಡಿ  ಮುಚ್ಚಲು ಹಾಸನ ಸಮಾವೇಶ

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ

ದಾವಣಗೆರೆ, ಡಿ. 5- ಭ್ರಷ್ಠಾಚಾರದ ಗುಂಡಿ ಮುಚ್ಚುವ ಸಲುವಾಗಿ ಹಾಸನದಲ್ಲಿ ಕಾಂಗ್ರೆಸ್ ಪಕ್ಷ ಜನ ಕಲ್ಯಾಣ ಸಮಾವೇಶ ನಡೆಸಿದೆ. ಮೂರು ಉಪ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಸಮಾವೇಶ ಎಂದಿದ್ದಾರೆ. ಗೆದ್ದಿದ್ದು ಹೇಗೆ ಎಂಬುದು ಗೊತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯ ಫಲಿತಾಂಶದಿಂದ ಸರ್ಕಾರ ಬರೋಲ್ಲ. ಹೋಗೊಲ್ಲ ಎಂದು ಜನ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆಂದು ಹೇಳಿದರು.

ಮೂರು ಉಪ ಚುನಾವಣೆಯಲ್ಲಿನ ಫಲಿತಾಂಶ ಭ್ರಷ್ಟಾಚಾರಕ್ಕೆ ಲೈಸನ್ಸ್ ಅಲ್ಲವೇ ಅಲ್ಲ ಎಂದ ಅವರು, ಬಿಜೆಪಿಯವರು ಏನೇ ಟೀಕೆ ಮಾಡಿದರೂ ಬಗ್ಗಲ್ಲ, ಜಗ್ಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಹಾಗಾದರೆ ರಾತ್ರೋರಾತ್ರಿ ಯಾಕೆ 14 ಮುಡಾ ನಿವೇಶನಗಳನ್ನು ವಾಪಸ್ ಮಾಡಿದರು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅಘೋಷಿತ ಕಾನೂನು ಜಾರಿಯಾಗಿದೆ. ಎಷ್ಟು ಬೇಕಾದರೂ ಕಳ್ಳತನ ಮಾಡಿ, ಲೂಟಿ ಮಾಡಿ, ಸಿಕ್ಕಿ ಬಿದ್ದರೆ ಮಾತ್ರ ವಾಪಸ್ ಮಾಡಿ. ಅಲ್ಲಿಗೆ ನಿಮ್ಮ ಮೇಲಿನ ಕೇಸ್ ಖುಲಾಸ್ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಳ್ಳ ಸರ್ಕಾರ. ಈಗ ಜಮೀನು ಕದಿಯುವುದಕ್ಕೆ ಬಂದಿದ್ದಾರೆ. ಮುಂದು ವಕ್ಫ್ ಬೋರ್ಡ್‌ನಿಂದಲೂ ಎನ್‌ಓಸಿ (ನಿರಾಪೇಕ್ಷಣಾ ಪತ್ರ) ತರುವ ಕಾಲವೂ ಬರಬಹುದು. ಇಂತಹ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು.

ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ಇದೀಗ ನಂಬರ್ ಒನ್ ಆಗಿದ್ದಾರೆ.  2014  ಮತ್ತು 2018 ರಲ್ಲಿ ಇದೇ ನನ್ನ ಕೊನೆ ಚುನಾವಣೆ ಎಂದಿದ್ದರು. ಇದೀಗ 2024 ಕ್ಕೆ ಬಂದಿದ್ದಾರೆ. ಅವರ ಮಾತುಗಳಲ್ಲಿ ನೈಜತೆ ಇರುವುದಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಡಾಳು ಮಲ್ಲಿಕಾರ್ಜುನ್, ನಾರಾಯಣಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು. 

error: Content is protected !!