ದಾವಣಗೆರೆ, ಡಿ.5- ಹೊರ ಗುತ್ತಿಗೆ ಏಜೆನ್ಸಿಗಳನ್ನು ರದ್ದುಪಡಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೀದರ್ ಮಾದರಿ ಸೊಸೈಟಿ ರಚಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿಯಲ್ಲಿ ಬರುವ ವಸತಿ ನಿಲಯಗಳು ಮತ್ತು ವಸತಿ ಶಾಲೆಗಳಲ್ಲಿ ಹಲವು ವರ್ಗಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಅಡುಗೆಯವರು, ಅಡುಗೆ ಸಹಾಯಕರು ರಾತ್ರಿ ಕಾವಲುಗಾರರಾಗಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಈ ಕಾರ್ಮಿಕರಿಗೆ ವೇತನ ಪಿಎಫ್ ಇಎಸ್‌ಐ, ನೇಮಕಾತಿ ಪತ್ರ ಗುರುತಿನ ಚೀಟಿ ವೇತನ ರಶೀದಿ ರಜೆ ಸೌಲಭ್ಯಗಳು ಕಾಲಕ್ಕೆ ಸರಿಯಾಗಿ ದೊರಕುತ್ತಿಲ್ಲ. ಗುತ್ತಿಗೆದಾರರು ಕಾರ್ಮಿಕರಿಗೆ ವೇತನ. ಪಿಎಫ್. ಇಎಸ್‌ಐ ಕೊಡುವುದರಲ್ಲಿ ವಂಚನೆ ಮಾಡುತ್ತಿದ್ದಾರೆ.
ಈ ಬಗ್ಗೆ ಸಾಕಷ್ಟು ಸಲ ಸರ್ಕಾರದ ಗಮನಕ್ಕೆ ತಂದರೂ ಸಮಸ್ಯೆ ಬಗೆ ಹರಿದಿಲ್ಲ. ಅಲ್ಲದೆ ಹೊರಗುತ್ತಿಗೆ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆ ಅನ್ವಯ ನಿಗದಿಯಾದ ಶಾಸನಬದ್ಧ ಸೌಲಭ್ಯಗಳನ್ನು ಸಹಿತ ನೀಡುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಈ ಹೊರಗುತ್ತಿಗೆ ಏಜೆನ್ಸಿ ಗಳಿಂದ ಆಗುತ್ತಿರುವ ಅಕ್ರಮ ಹಾಗೂ ಅನ್ಯಾಯ ಗಳನ್ನು ತಡೆಗಟ್ಟಲು ಕಾರ್ಮಿಕ ಸಚಿವರು ಹಾಗೂ ರಾಜ್ಯ ಸರ್ಕಾರವು ಈ ಹೊರಗುತ್ತಿಗೆ ಏಜೆನ್ಸಿಗಳ ಬದಲಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕಾರ್ಮಿಕ ಸೇವೆ ವಿವಿಧೋದ್ದೇಶ ಸಹಕಾರ ಸಂಘ ರಚಿಸುವಂತೆ ಸಲಹೆ, ಹಣಕಾಸು ಇಲಾಖೆಯಿಂದ ಅನುಮತಿ ಸಹ ನೀಡಿದ್ದಾರೆ.
ಹೊರಗುತ್ತಿಗೆ ಕಾರ್ಮಿಕರಿಗೆ ನ್ಯಾಯವೊದಗಿ ಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ದಾವಣಗೆರೆ ಜಿಲ್ಲಾ ಕಾರ್ಮಿಕ ಸೇವೆ ವಿವಿಧೋದ್ದೇಶ ಸಹಕಾರ ಸಂಘವನ್ನು ರಚಿಸಬೇಕೆಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಕೈದಾಳೆ, ಸ್ವಾಮಿ ನಿಂಗಪ್ಪ, ರವಿನಾಯ್ಕ, ನಿಂಗಪ್ಪ ಸಿದ್ದಮ್ಮನಹಳ್ಳಿ, ರತ್ನಮ್ಮ, ನವೀನ್, ಮನೋಹರ್, ಮಂಜುಳಮ್ಮ ಇತರರು ಉಪಸ್ಥಿತರಿದ್ದರು.