`ನಮ್ಮ ಭೂಮಿ ನಮ್ಮ ಹಕ್ಕು’ ಹೋರಾಟ ಸಭೆಯಲ್ಲಿ ಸಿಎಂಗೆ ಛಲವಾದಿ ನಾರಾಯಣ ಸ್ವಾಮಿ ಸವಾಲು
ಮಲೇಬೆನ್ನೂರು, ಡಿ. 5- ನಿಮಗೆ ತಾಕತ್ತಿದ್ದರೆ 1974ರಲ್ಲಿ ಜಾರಿಗೊಳಿಸಿರುವ ವಕ್ಫ್ ಕಾಯ್ದೆ ಗೆಜೆಟ್ ರದ್ದುಪಡಿಸಿ, ಜೊತೆಗೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸಿಎಂ ಸಿದ್ದಾರಾಮಯ್ಯ ಅವರಿಗೆ ಬಹಿರಂಗ ಸವಾಲು ಹಾಕಿದರು.
ಅವರು ಗುರುವಾರ ಭಾನುವಳ್ಳಿ ಗ್ರಾಮದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ `ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನದ ನೇತೃತ್ವ ವಹಿಸಿ ಮಾತನಾಡಿದರು.
ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇಲ್ಲದ ವಕ್ಫ್ ಬೋರ್ಡ್ ಭಾರತದಲ್ಲಿ ಮಾತ್ರ ಯಾಕೆ? ಎಂದು ಪ್ರಶ್ನಿಸಿದ ನಾರಾಯಣ ಸ್ವಾಮಿ ಅವರು `ವಕ್ಫ್’ ನೆಹರು ಮನೆತನದ ಕೊಡುಗೆಯಾಗಿದ್ದು, ಈ ದೇಶವನ್ನು ಸಮಸ್ಯೆಯಲ್ಲಿಡಬೇಕೆಂಬ ಉದ್ದೇಶದಿಂದ 1969-70ರಲ್ಲಿ ಇಂದಿರಾಗಾಂಧಿ ಅವರು ದೇಶದಲ್ಲಿರುವ ವಕ್ಫ್ ಆಸ್ತಿ ಸರ್ವೆ ಮಾಡಿಸಿ, 1974ರಲ್ಲಿ ವಕ್ಫ್ ಕಾಯ್ದೆಯ ಗಜೆಟ್ ಜಾರಿಗೊಳಿಸಿದ್ದಾರೆ ಎಂದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಆಸ್ತಿ ಗುರುತಿಸುವ ನೆಪದಲ್ಲಿ ಹಿಂದೂಗಳ ಜಮೀನು, ದೇವಸ್ಥಾನ, ಮಠಗಳ ಆಸ್ತಿಯನ್ನೂ ಕಬಳಿಸಲು ಮುಂದಾಗಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕು ಇದೆ ಎಂದು ದೂರಿದ ನಾರಾಯಣಸ್ವಾಮಿ ಅವರು, ಮಾಹಿತಿ ಪ್ರಕಾರ ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ಎಕರೆ ಜಮೀನು ವಕ್ಫ್ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ. ಭಾನುವಳ್ಳಿ ಗ್ರಾಮದಲ್ಲಿ ಹಿಂದೂಗಳ ರುದ್ರಭೂಮಿಗೆ ಮೀಸಲಾಗಿದ್ದ 6 ಎಕರೆ 15 ಗುಂಟೆ ಜಮೀನನ್ನೂ ವಕ್ಫ್ ಆಸ್ತಿ ಎಂದು ದಾಖಲೆ ಸೃಷ್ಟಿ ಮಾಡಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಆಸ್ತಿ ವಿಚಾರವಾಗಿ ರಾಜ್ಯದಲ್ಲಿ ಗೊಂದಲ ಶುರುವಾಗಿ ರೈತರಿಂದ ವ್ಯಾಪಾರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, 11ನೇ ಕಾಲಂ ತೆಗೆಯುವುದಾಗಿ ಹೇಳಿ ತಾತ್ಕಾಲಿಕ ಸಮಾಧಾನ ಮಾಡಲು ಮುಂದಾಗಿದೆ. 11 ನೇ ಕಾಲಂ ತೆಗೆಯುವುದಕ್ಕಿಂತ ವಕ್ಫ್ ಕಾಯ್ದೆಯ ಗಜೆಟ್ಟನ್ನೇ ರದ್ದುಪಡಿಸಿ, ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳ್ಳಲಿದೆ ಎಂದು ಛಲವಾದಿ ನಾರಾಯಣಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಾನುವಳ್ಳಿಯಲ್ಲಿ ಬಿಜೆಪಿ ಜನ ಆಂದೋಲನ
ವಕ್ಫ್ ಕಾಯ್ದೆ ವಿರುದ್ಧ ರಾಜ್ಯದಲ್ಲಿ ಬುಧವಾರದಿಂದ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಜನ ಆಂದೋಲನ ಪ್ರಾರಂಭಿಸಿರುವ ಬಿಜೆಪಿ ಗುರುವಾರ ಭಾನುವಳ್ಳಿ ಗ್ರಾಮದಲ್ಲಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಹಿಂದೂ ರುದ್ರ ಭೂಮಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿತು. ಈ ವೇಳೆ ಗ್ರಾಮದ ಟಿ.ಆರ್. ಮಹೇಶ್ವರಪ್ಪ ಅವರು, ಹಿಂದೂ ರುದ್ರಭೂಮಿಯ ಎಲ್ಲ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಮಾಡಿಕೊಂಡಿರುವ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದರು.
ಮಾಜಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ನಾವು-ನೀವು ಎಚ್ಚರ ವಹಿಸದಿದ್ದರೆ ಗೌರಿ ಹೆಸರು ನಾಳೆ ಗೌಸಿಯಾ ಆಗಲಿದೆ. ನಮ್ಮ ಹಕ್ಕು, ಅಸ್ತಿತ್ವ ಮತ್ತು ಆಸ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಎಲ್ಲಾ ಹಿಂದೂಗಳು ಪಕ್ಷಾತೀತವಾಗಿ ಈ ಜನಾಂದೋಲನವನ್ನು ಬೆಂಬಲಿಸುವವರು ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ಮನವಿ ಮಾಡಿದರು.
ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿ, ರಾಜ್ಯಸರ್ಕಾರ 2 ಸಾವಿರ ರೂ.ಗಳನ್ನು ನಿಮ್ಮ ಹೆಂಡ್ತಿ ಖಾತೆಗೆ ಹಾಕಿ, ನಿಮ್ಮ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಮಾಡಲು ಹೊರಟಿದೆ. ಅಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ ಮಾತನ್ನು ತಿರಸ್ಕರಿಸಿದ ಗಾಂಧೀಜಿ, ನೆಹರು ಅವರಿಂದಾಗಿ ಇವತ್ತು ನಮಗೆ ಈ ಪರಿಸ್ಥಿತಿ ಎದುರಾಗಿದೆ.
ಈ ದೇಶ ಉಳಿಯಬೇಕಾದರೆ ಕಾಂಗ್ರೆಸ್ ಪಕ್ಷ ಉಳಿಯಬಾರದು. ಹಾಸನದಲ್ಲಿ ಜನ ಕಲ್ಯಾಣ ಮಾಡಿದ ಸಿದ್ದರಾಮಯ್ಯ ಅವರಿಗೆ ಯಾವ ನೈತಿಕತೆ ಇದೆ ? ಎಂದು ಪ್ರಶ್ನಿಸಿದ ಮುನಿಸ್ವಾಮಿ, ರಾಜ್ಯದಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸ ಮೊದಲು ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ವಕ್ಫ್ ಕಾಯ್ದೆಯಿಂದ ಜನ ಆತಂಕಕ್ಕೆ ಒಳಗಾಗಬಾರದೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಮುಂದೆ ಮೂರು ತಂಡಗಳಾಗಿ `ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಜನ ಆಂದೋಲನ ಆರಂಭಿಸಿದ್ದೇವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಅವರು, ಯಾರು ಏನೇ ಕುತಂತ್ರ ಮಾಡಿದರೂ ಹಿಂದೂಗಳ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ. ಕೇಂದ್ರ ಸರ್ಕಾರ ಶೀಘ್ರದಲ್ಲೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನೀಲ್‌ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ವೈ.ಎ. ನಾರಾಯಣಸ್ವಾಮಿ, ಜಗಳೂರು ಮಾಜಿ ಶಾಸಕ ಹೆಚ್.ಪಿ. ರಾಜೇಶ್, ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್, ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಭಾನುವಳ್ಳಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಪಾಟೀಲ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳು, ಅನಿಲ್ ನಾಯ್ಕ, ಐರಣಿ ಅಣ್ಣಪ್ಪ, ಬಿ.ಎಸ್. ಜಗದೀಶ್, ಹುಗ್ಗಿ ಮಹಾಂತೇಶ್, ಆದಾಪುರ ವೀರೇಶ್, ಎ.ಕೆ. ಮಂಜಪ್ಪ, ಗ್ರಾ.ಪಂ. ಸದಸ್ಯ ಟಿ. ಧನ್ಯಕುಮಾರ್, ಜಿಗಳಿ ಹನುಮಗೌಡ, ಕೆ.ಎನ್. ಹಳ್ಳಿಯ ಬಣಕಾರ್ ಪರಮೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.
ಆರಂಭದಲ್ಲಿ ಸ್ವಾಗತಿಸಿದ ಹರಿಹರ ತಾ. ಗ್ರಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್ ಅವರು, ಹರಿಹರ ತಾಲ್ಲೂಕಿನಲ್ಲಿ ವಕ್ಫ್ ಆಸ್ತಿಗಳನ್ನಾಗಿ ಮಾಡಿರುವ ಬಗ್ಗೆ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದರು.