ಜಿಲ್ಲಾ ಮಟ್ಟದ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಶಾಸಕ ಶಿವಗಂಗಾ ಬಸವರಾಜ್
ದಾವಣಗೆರೆ, ಡಿ. 5- ಹಿಂಜರಿಕೆ ಮಟ್ಟಿ ನಿಂತು ಜೀವನ ಸಾಧನೆ ಮಾಡುವಂತೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 2024-25ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಪಠ್ಯೇತರ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾನೂ ಸಹ ಮೋತಿ ವೀರಪ್ಪ ಕಾಲೇಜು ವಿದ್ಯಾರ್ಥಿಯಾಗಿದ್ದೆ. ಆಗ ನನಗೆ ಉಪನ್ಯಾಸಕ ರೆಂದರೆ ಅಂಜಿಕೆ, ಹಿಂಜರಿಕೆ ಇತ್ತು ಎಂದು ನೆನಪಿಸಿಕೊಂಡ ಶಾಸಕರು, ನೀವು ಧೈರ್ಯದಿಂದ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಸರ್ಕಾರಿ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿ ಗಳಲ್ಲಿ ಹೆಚ್ಚಿನವರು ಪ್ರತಿಭಾವಂತರಿರುತ್ತಾರೆ. ವಿದ್ಯಾರ್ಥಿಗಳಿಗಾಗಿ ಸರ್ಕಾರವೂ ಅನೇಕ ಸೌಲಭ್ಯ ಗಳನ್ನು ನೀಡುತ್ತದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಗುರಿ ಸಾಧಿಸಬೇಕು ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಅಂಕ ಗಳಿಕೆಯ ಜೊತೆಗೆ ಗುರು-ಹಿರಿಯರಿಗೆ ಗೌರವ ಕೊಡುವುದನ್ನೂ ಕಲಿಯಬೇಕು ಎಂದು ಹೇಳಿದರು.
ಪ್ರತಿಯೊಬ್ಬರಲ್ಲೂ ಒಂದೊಂದು ರೀತಿಯ ಕಲೆ, ಪ್ರತಿಭೆ ಇರುತ್ತದೆ. ಅದನ್ನು ಸ್ಫೂರ್ತಿದಾಯಕ ವಾಗಿ ಬಳಸಿಕೊಂಡು ಓದಿನ ಕಾಲೇಜಿಗೆ, ಹೆತ್ತವ ರಿಗೆ, ನಗರಕ್ಕೆ ಕೀರ್ತಿ ತನ್ನಿ ಎಂದು ಆಶಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕರಿಸಿದ್ದಪ್ಪ ಎಸ್.ಜಿ., ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಂಚಾಕ್ಷರಪ್ಪ ಎಸ್., ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಎಸ್., ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಕುಸುಗಟ್ಟಿ ಟಿ.ಎಂ., ಜೀನಳ್ಳಿ ಸರ್ಕಾರಿ ಪ.ಪೂ. ಕಾಲೇಜು ಪ್ರಾಂಶುಪಾಲ ಶರಣಪ್ಪ ಎನ್.ಗೋವಿನಗಿಡದ, ಕಾರಿಗನೂರು ಕಾಲೇಜು ಪ್ರಾಂಶುಪಾಲ ಶಿವಾನಂದ ಆರ್.ಕುಡಪಲಿ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ರವಿ ಸಿ.ಬಿ. ಉಪಸ್ಥಿತರಿದ್ದರು.