ಕೀಳು ಮಟ್ಟದ ಹೇಳಿಕೆ ತಕ್ಷಣ ನಿಲ್ಲಿಸಿ: ಎಸ್ಸೆಸ್

ಕೀಳು ಮಟ್ಟದ ಹೇಳಿಕೆ ತಕ್ಷಣ ನಿಲ್ಲಿಸಿ: ಎಸ್ಸೆಸ್

ಬಸವಣ್ಣನವರ ಕುರಿತ ಯತ್ನಾಳ್ ಹೇಳಿಕೆಗೆ ವೀರಶೈವ ಮಹಾಸಭಾ ಖಂಡನೆ

ದಾವಣಗೆರೆ, ಡಿ.4- ಬಸವಣ್ಣನವರ ಕುರಿತು ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ನೀಡಿರುವ ಹೇಳಿಕೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತೀವ್ರವಾಗಿ ಖಂಡಿಸಿದೆ.

ನಾಲಿಗೆಯ ಮೇಲೆ ಹಿಡಿತವಿರಲಿ, ಇಂತಹ ಕೀಳುಮಟ್ಟದ ಹೇಳಿಕೆ ನೀಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ, ನಿಮ್ಮನ್ನು ಹಾಳು ಬಾವಿಗೆ ನೂಕುವುದು ಸಮಾಜಕ್ಕೆ ಗೊತ್ತಿದೆ ಎಂದು ಎಚ್ಚರಿಕೆ ನೀಡಿದೆ.

`ನಾಲಿಗೆ ಕುಲ ಹೇಳುತ್ತದೆ’ ಎಂಬ ಮಾತಿದೆ. ನಿಮ್ಮ ಹೇಳಿಕೆಗಳು ಮತ್ತು ನಡವಳಿಕೆಗಳನ್ನು ಗಮನಿಸಿದಾಗ ನೀವು ವೀರಶೈವ ಲಿಂಗಾಯತರೇ ಎಂಬ ಅನುಮಾನ ಮೂಡುತ್ತದೆ. ವೀರಶೈವ ಲಿಂಗಾಯಿತರಿಗೆ ಇರಬೇಕಾದ ಆಚಾರವಾಗಲಿ, ಸಂಸ್ಕಾರವಾಗಲಿ ನಿಮ್ಮಲ್ಲಿ ಇರದೇ ಇರುವುದು ದುರದೃಷ್ಟಕರ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಸವಣ್ಣನವರ ವಿಚಾರಗಳು ವಿಶ್ವದಾದ್ಯಂತ ಮುನ್ನೆಲೆಗೆ ಬರುತ್ತಿರುವುದನ್ನು ಸಹಿಸದ ಒಂದು ವರ್ಗ ತಮ್ಮಿಂದ ಇಂತಹ ಹೇಳಿಕೆಗಳನ್ನು ಹೇಳಿಸುತ್ತಿದೆ ಎಂದು ಭಾವಿಸಬೇಕಾಗುತ್ತದೆ.  

ಸಮುದಾಯ ಬಾಂಧವರು ಎಂಬ ಕಾರಣಕ್ಕೆ ನಿಮ್ಮ ಹುಚ್ಚಾಟಗಳನ್ನು ಸಹಿಸಿಕೊಂಡಿದ್ದೆವು. ಇಂತಹ ಹುಚ್ಚಾಟಗಳಿಗೆ ಇತಿಶ್ರೀ ಹಾಡುತ್ತೀರೆಂದು ಭಾವಿಸುತ್ತೇವೆ. ಇಲ್ಲವಾದರೆ, ಸಮಾಜವೇ ಇದಕ್ಕೆ ಕಡಿವಾಣ ಹಾಕುತ್ತದೆ ಎಂದು ಶಿವಶಂಕರಪ್ಪ ಹೇಳಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಕೃತ್ಯವನ್ನು ಸಹಿಸುವುದಿಲ್ಲ. ಮಹಾಸಭೆಯ ಗೌರವಾಧ್ಯಕ್ಷ ಭೀಮಣ್ಣ ಖಂಡ್ರೆ, ಜನನಾಯಕ ಬಿ.ಎಸ್‌.ಯಡಿಯೂರಪ್ಪ ಮತ್ತು ನಾನು ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಳ್ಳದೆ ಟೀಕೆ ಮಾಡುವುದು ಸರಿಯಲ್ಲ. ಮಹಾಸಭಾ ಟೀಕಿಸುವ ಮೊದಲು ನೀವು ಸಮಾಜಕ್ಕೆ ನೀಡಿರುವ ಕೊಡುಗೆ ಏನು  ಎಂದವರು ಪ್ರಶ್ನಿಸಿದ್ದಾರೆ.

error: Content is protected !!