ಪಂಚಮಸಾಲಿ ಮೀಸಲಾತಿ : 10 ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಮೀಸಲಾತಿ : 10 ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ

ದಾವಣಗೆರೆ, ಡಿ. 4- ಪಂಚಮಸಾಲಿ, ಮಲೇಗೌಡ, ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತರ ಮಕ್ಕಳ ಶಿಕ್ಷಣ, ವಿದ್ಯಾರ್ಥಿ ಯುವಜನರ ಉದ್ಯೋಗಕ್ಕಾಗಿ 2 ಎ ಮೀಸಲಾತಿ ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಓಬಿಸಿ ಮೀಸಲಾತಿಗಾಗಿ ಒತ್ತಾಯಿಸಿ ಇದೇ ದಿನಾಂಕ 10 ರಂದು ಬೆಳಿಗ್ಗೆ 10 ಕ್ಕೆ ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಗೂ ರೈತರಿಂದ ಬೃಹತ್ ಟ್ರ್ಯಾಕ್ಟರ್ ರಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಅಖಿಲ ಭಾರತ ಲಿಂಗಾಯತ ಮಹಾಸಭಾ (ಕೂಡಲಸಂಗಮ), ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಅಡ್ವೊಕೇಟ್ ಪರಿಷತ್ತು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಪಂಚಸೇನಾ, ಯುವ ಘಟಕ ಚನ್ನಮ್ಮನ ಬಳಗ, ರೈತ ಘಟಕ, ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ಘಟಕಗಳ ಸಹಯೋಗದಲ್ಲಿ ಬೆಳಗಾಗಿ ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಗೃಹ ಕಚೇರಿ ಸಭಾಂಗಣದಲ್ಲಿ ಮೊನ್ನೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2 ಎ ಮೀಸಲಾತಿಗೆ ಆಗ್ರಹಿಸಿ, ಕಳೆದ ನಾಲ್ಕು ವರ್ಷಗಳಿಂದ ನಿರಂತರ ಮತ್ತು ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಕೊನೆ ಗಳಿಗೆಯಲ್ಲಿ ಮೀಸಲಾತಿ ಕುರಿತು ನಿರ್ಧಾರ ಕೈಗೊಂಡಿತ್ತಾದರೂ ಮೀಸಲಾತಿ ಪ್ರಸ್ತಾಪ ಅಲ್ಲಿಗೆ ಸ್ಥಗಿತಗೊಂಡಿತು. ಆದರೂ ಹೋರಾಟವನ್ನು ನಿಲ್ಲಿಸದೇ ನಿರಂತರಾಗಿ ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯ ಸರ್ಕಾರ ನಮ್ಮ ಹೋರಾಟಕ್ಕೆ ಮಾನ್ಯತೆ ನೀಡುತ್ತಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಕಾಳಜಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಲ್ಲದೇ, ರಸ್ತೆಯಲ್ಲಿಯೇ ಇಷ್ಟಲಿಂಗ ಪೂಜೆ ಮೂಲಕ ವಿನೂತನ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಕಾನೂನಾತ್ಮಕ ಹೋರಾಟಕ್ಕೆ ಮುಂದಾದಾಗ ಸಿಎಂ ಎರಡು ತಾಸು ಸಭೆ ನಡೆಸಿದ್ದಾರೆ. ಉಪ ಚುನಾವಣಾ ನೆಪ ಮಾಡಿಕೊಂಡು ಯಾವ ನಿರ್ಣಯ ಕೈಗೊಂಡಿಲ್ಲ ಎಂದು ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದರು.

ಅಂತಿಮ ಅಸ್ತ್ರವಾಗಿ ಇದೇ ದಿನಾಂಕ 10 ರಂದು ಬೆಳಿಗ್ಗೆ 10 ಗಂಟೆೆಗೆ ಸಮಾಜದ ಲಕ್ಷಾಂತರ ಮಂದಿ ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಹಾಕಲಿದ್ದಾರೆ ಎಂದು ಎಚ್ಚರಿಸಿದ ಶ್ರೀಗಳು, ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ರಾಲಿ ಕೂಡ ನಡೆಯಲಿದೆ. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುವುದಾ ಗಲೀ, ರಾಲಿಯನ್ನು ತಡೆಯುವುದಕ್ಕೆ ಮುಂದಾದರೆ ಮುಂದಾಗುವ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಯಾರೂ ಮಾಡಬಾರದು: ಪಂಚಮಸಾಲಿ ಹೋರಾಟ ಕವಲು ದಾರಿಯಲ್ಲಿ ಹೋಗುತ್ತಿಲ್ಲ. ಹೋರಾಟದ ದಿಕ್ಕು ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಮಾಜಿ ಶಾಸಕರೂ ಆದ ಸಮಾಜದ ಮುಖಂಡ ಹೆಚ್.ಎಸ್.ಶಿವಶಂಕರ್ ಹೇಳಿದರು.

ಸಮಾಜದ ನಾಯಕರು ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸ ಮಾಡಬೇಕು. ಸಮಾಜದ ಒಳಿತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. 2 ಎ ಮೀಸಲಾತಿ ಪಡೆಯುವುದು ಸಮಾಜದ ಎಲ್ಲರ ಮುಖ್ಯ ಉದ್ದೇಶವಾಗಿದೆ. ಹೋರಾಟದ ತೀಕ್ಷಣತೆಗೆ ತಣ್ಣೀರು ಎರಚುವ ಕೆಲಸ ಮಾಡಬಾರದೆಂದು ಮನವಿ ಮಾಡಿದರು.

ಶ್ರೀಗಳು ಪೀಠ ಬಿಟ್ಟು 2 ಎ ಮೀಸಲಾತಿಯನ್ನು ಸಮಾಜಕ್ಕೆ ಕೊಡಿಸಲೇಬೇಕೆಂಬ ಛಲದಿಂದ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿ ದ್ದಾರೆ. ಶ್ರೀಗಳ ಬಗ್ಗೆ ಅಪನಂಬಿಕೆ ಬೇಡ. ಶ್ರೀಗಳಿಗೆ ಸಮಾಜದ ಬಗ್ಗೆ ಅಪಾರ ಕಳಕಳಿ ಇದೆ ಎಂದರು.

ಪಾಲಿಕೆ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಬೆಳಗಾವಿ ಸುವರ್ಣ ಸೌಧ ಮುತ್ತಿಗೆ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆಯಿಂದಲೂ ಅಧಿಕ ಸಂಖ್ಯೆಯಲ್ಲಿ ಬರುವಂತೆ ಆಹ್ವಾನ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಕಾರಿಗನೂರು ಕಲ್ಲೇಶಪ್ಪ, ಚನ್ನಬಸವನಗೌಡರು, ಮಯೂರ್, ಆನಂದ ಜಿರಲೆ, ಬಿ.ಜಿ.ಭರತ್, ಕೊಟ್ರೇಶ್, ಚಂದ್ರು, ಮಹೇಶ್ ಉಪಸ್ಥಿತರಿದ್ದರು. 

error: Content is protected !!