ಅವ್ಯವಸ್ಥೆಯಲ್ಲಿ ಐತಿಹಾಸಿಕ ಊರು, ನಗರಸಭೆಯ ನಿರ್ಲಕ್ಷ್ಯ, ಹರಿಹರಕ್ಕೆ ಗುಂಡಿ ರೋಗ
ದಾವಣಗೆರೆ-ಹರಿಹರವನ್ನು ಅವಳಿ ನಗರವೆಂದರೆ ತಪ್ಪಾಗಲಾರದು. ಜಿಲ್ಲಾ ಕೇಂದ್ರಕ್ಕೆ ಹತ್ತಿರವಿರುವ ಹಾಗೂ ಸ್ಮಾರ್ಟ್ ಸಿಟಿಗೆ ಅಂಟಿಕೊಳ್ಳುತ್ತಿರುವ ಹರಿಹರವು ದಶಕಗಳಿಂದಲೂ ಅಭಿವೃದ್ಧಿ ಹಾಗೂ ಸೌಂದರ್ಯ ವೃದ್ಧಿಯಲ್ಲಿ ಹೊಸತನದ ಸ್ಪರ್ಷ ಮರೀಚಿಕೆಯಾಗಿದೆ.
ಹೌದು, ನಗರದಲ್ಲಿ ಪಿ.ಬಿ. ರಸ್ತೆ ಹೊಸದಾಗಿ ನಿರ್ಮಾಣಗೊಂಡು ದಶಕಗಳೇ ಕಳೆದರೂ, ಇಂದಿಗೂ ರಸ್ತೆ ವಿಭಜಕಗಳಲ್ಲಿ ಅಲಂಕಾರಿಕ ಗಿಡಗಳು ತಲೆ ಎತ್ತಲಿಲ್ಲ. ಈ ಬಗ್ಗೆ ನಗರಸಭೆಯೂ ಸಹ ಅಲಂಕಾರಿಕ ಗಿಡ ಬೆಳೆಸುವ ಯೋಚನೆ ಮಾಡುತ್ತಿಲ್ಲ.
ರಸ್ತೆ ವಿಭಜಕಗಳಲ್ಲಿ ಕಸ-ಮುಸರಿ ಮತ್ತು ಪ್ಲಾಸ್ಟಿಕ್ ರಾಶಿ ಬಿದ್ದಿರುತ್ತದೆ. ಹೀಗೆ ಮಲಿನಗೊಂಡ ರಸ್ತೆ ವಿಭಜಕಗಳು ದುರ್ನಾತ ಬೀರುತ್ತಿವೆ. ಸುಂದರವಾಗಿ ಕಾಣಬೇಕಿದ್ದ ಐತಿಹಾಸಿಕ ಊರು ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಲೇ ಇದೆ.
ರಸ್ತೆ ವಿಭಜಕಗಳಿಗೆ ಜಾಹೀರಾತು ಪ್ರತಿ ಅಂಟಿಸಿರುವುದು, ಉಗಿದ ಗುಟಕಾ ಕಲೆಗಳು ಹಾಗೂ ವಿಭಜಕಗಳಿಗೆ ಬಳಿದ ಬಣ್ಣ ಮಾಸಿದ್ದರಿಂದ ನಗರದ ಅಂದ ಕ್ಷೀಣಿಸಿದೆ.
ಇಲ್ಲಿನ ಪಿ.ಬಿ ರಸ್ತೆಯಲ್ಲಿ ಅಲಂಕಾರಿಕ ಗಿಡಗಳು ಇಲ್ಲದಿರುವುದರಿಂದ ನಗರದ ಅಂದ ಕುಗ್ಗಿದೆ. ಈ ಕೂಡಲೇ ನಗರಸಭೆ ಅಲಂಕಾರಿಕ ಗಿಡ ನೆಡುವ ಕಾರ್ಯದ ಜತೆಗೆ ಊರಿನ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು.
– ವೀರೇಶ್ ಅಜ್ಜಣ್ಣನವರ್,ವಕೀಲರು ಹಾಗೂ ಪರಿಸರ ಪ್ರೇಮಿ
1) ಡಿವೈಡರ್ಗಳಲ್ಲಿ ಕಸದ ರಾಶಿ ತುಂಬಿರುವುದು. 2) ಫ್ಲೈ ಒವರ್ ಕೆಳಗಿನ ರಸ್ತೆಯಲ್ಲಿ ಜಲ್ಲಿ ಕಲ್ಲು ಎದ್ದಿರುವುದು ಹಾಗೂ ಕಬ್ಬಿಣದ ರಾಡುಗಳು ಕಣ್ಣಿಗೆ ರಾಚುತ್ತಿರುವುದು. 3) ಅಪೂರ್ಣಗೊಂಡ ರಸ್ತೆ ವಿಭಜಕ
ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಹರಿಹರ ಮಾರ್ಗವಾಗಿ ಸಂಚರಿಸುವ ಪರಸ್ಥಳದ ಪ್ರಯಾಣಿಕರು, ಈ ಊರಿನ ಅವ್ಯವಸ್ಥೆಯ ಬಗ್ಗೆ ಆಡಿಕೊಳ್ಳುವುದು ಇಲ್ಲಿನ ವಾಸಿಗಳಿಗೆ ಮುಜುಗರ ತಂದಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಅವೈಜ್ಞಾನಿಕ ರಸ್ತೆ ವಿಭಜಕ : ಇಲ್ಲಿನ ರಸ್ತೆ ವಿಭಜಕಗಳು ಅಲ್ಲಲ್ಲಿ ಅಪೂರ್ಣ ಸ್ಥಿತಿಯಲ್ಲಿವೆ. ಕೆಲವೆಡೆ ರಾಡುಗಳು ಕಣ್ಣಿಗೆ ರಾಚುತ್ತವೆ ಮತ್ತು ರಸ್ತೆ ಬದಲಿಸುವ ಸ್ಥಳದಲ್ಲಿ ಕಾಂಕ್ರಿಟ್ ಹಾಕದಿರುವುದರಿಂದ ಮಣ್ಣು, ಕಲ್ಲು ಹಾಗೂ ಗುಂಡಿಗಳಿವೆ.ಇದರಿಂದಾಗಿ ವಾಹನ ಸವಾರರು ರಸ್ತೆ ಬದಲಿಸುವಾಗ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ.
ದ್ವಿಚಕ್ರ ವಾಹನ ಸವಾರರು ರಸ್ತೆ ಬದಲಿಸುವ ವೇಳೆ ಸ್ಕಿಡ್ ಆಗಿ ಅಪಘಾತಕ್ಕೆ ತುತ್ತಾದ ಅನೇಕ ದುರಂತಗಳು ಸಂಭವಿಸಿದ್ದು, ಇಂತಹ ಘಟನೆ ಸಂಭವಿಸುವುದನ್ನು ತಪ್ಪಿಸಲು ಅಪೂರ್ಣವಾಗಿರುವ ವಿಭಜಕಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಗಳಿಗೆ ಗುಂಡಿ ರೋಗ : ಈ ಊರಿನ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಜಿಲ್ಲಾ ಕೇಂದ್ರಕ್ಕೆ ಸಾಗುವ ಫ್ಲೈ ಒವರ್ ಕೆಳಗಿನ ರಸ್ತೆ ಸಂಪೂರ್ಣ ಹಾಳಾಗಿ ಜಲ್ಲಿ ಕಲ್ಲು ಎದ್ದಿವೆ ಹಾಗೂ ಕಬ್ಬಿಣದ ರಾಡುಗಳು ಎದ್ದು ಕಾಣುತ್ತಿವೆ.
ಹರಪನಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಅಪಾಯ ಆಹ್ವಾನಿಸುವ ಗುಂಡಿಗಳಿದ್ದು, ಅವುಗಳನ್ನು ಮುಚ್ಚಲು ಆಗಾಗ ಮಣ್ಣು ತುಂಬುತ್ತಾರೆ. ಆದರೆ ಅವುಗಳಿಗೆ ಶಾಶ್ವತ ಪರಿಹಾರ ಇಲ್ಲದಂತಾಗಿದೆ.
– ಸುನೀಲ್ ಹರಿಹರ, [email protected]