ರಾಜೋಪಚಾರ ಪೂಜಾ ಕಾರ್ಯಕ್ರಮದಲ್ಲಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು
ಜೀವನವು ಪುಸ್ತಕವಿದ್ದಂತೆ. ಮೊದಲ ಮತ್ತು ಕೊನೆ ಪುಟ ಹುಟ್ಟು ಮತ್ತು ಸಾವು ಇದ್ದಂತೆ. ಹಾಗಾಗಿ ಪುಸ್ತಕದ ಮಧ್ಯದ ಪುಟಗಳಲ್ಲಿ ಜನ ಮೆಚ್ಚುವ ಉತ್ತಮ ಕಾರ್ಯಗಳನ್ನೇ ತುಂಬಬೇಕು.
– ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು
ದಾವಣಗೆರೆ, ಡಿ.3- ಮಾನವನ ಹುಟ್ಟು ಎಂಬುದು ಹಬ್ಬವಲ್ಲ, ಅದು ದುಃಖ ಹಾಗೂ ನೋವು ಆಗಿದೆ ಎಂದು ಯಡೂರು ಶ್ರೀಶೈಲಂನ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ತಿಳಿಸಿದರು.
ಇಲ್ಲಿನ ಶ್ರೀಶೈಲ ಮಠದಲ್ಲಿ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳ 53ನೇ ಜನ್ಮದಿ ನಾಚರಣೆ ಪ್ರಯುಕ್ತ ಮಠದ ಸಂಸ್ಕೃತ ಪಾಠ ಶಾಲಾ ಶಿಷ್ಯರು ಆಯೋಜಿಸಿದ್ದ ರಾಜೋಪಚಾರ ಪೂಜಾ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಪರಮಾತ್ಮನಲ್ಲಿ ಒಂದಾಗಿರುವ ಜೀವಾತ್ಮ, ಎಲ್ಲಿಯವರೆಗೆ ಪರಮಾತ್ಮನಲ್ಲಿ ಇರುತ್ತಾನೋ ಅಲ್ಲಿಯವರೆಗೆ ಸತ್-ಚಿತ್ ಆನಂದ ಮತ್ತು ನಿತ್ಯ ಪರಿಪೂರ್ಣ ಸ್ವರೂಪನಾಗಿರುತ್ತಾನೆ. ಆದರೆ ಪರಮಾತ್ಮನಿಂದ ಬೇರ್ಪಟ್ಟ ನಂತರ ಅವನು ಜೀವಾತ್ಮನಾಗಿ ಸಂಸಾರಿಕನಾಗಿ ಎಲ್ಲ ದುಃಖಗಳನ್ನು ಅನುಭವಿಸಲು ಬಾಧ್ಯನಾಗುತ್ತಾನೆ ಎಂದರು.
ಮಾನವನ ಹುಟ್ಟು, ಹಬ್ಬವಾಗಬೇಕಾದರೆ ಅವನು ಪರೋಪಕಾರ ಗುಣಗಳನ್ನು ಅಳವಡಿಸಿಕೊಂಡು ಸಮಾಜ ಸೇವೆ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರಮಿಸಬೇಕು. ಆಗ ಮಾತ್ರ ಮನುಷ್ಯನ ಹುಟ್ಟು ಲೋಕಕ್ಕೆಲ್ಲ ಹಬ್ಬವಾಗಲಿದೆ ಎಂದು ಹೇಳಿದರು.
ಜಗತ್ತೇ ಮೆಚ್ಚುವ ಸಾಧನೆ ಮಾಡಿದ್ದಲ್ಲಿ ಮಾತ್ರ ಹುಟ್ಟು ಮತ್ತು ಸಾವಿಗೆ ಅರ್ಥ ಬರಲಿದೆ ಎಂಬ ಮಾತನ್ನು ಕಬೀರರೂ ತಮ್ಮ ದೋಹೆಗಳಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಬದುಕಿನ ಪ್ರತಿ ಗಳಿಗೆಯಲ್ಲೂ ಸಾರ್ಥಕ ಜೀವನ ನಡೆಸಬೇಕು. ಪರಮಾತ್ಮನಿಂದ ಜೀವಾತ್ಮನಾಗಿ ಬಂದಾಗ ಪುನಃ ಪರಮಾತ್ಮನನ್ನು ಪ್ರಾಪ್ತಿಮಾಡಿಕೊಳ್ಳುತ್ತಾ ಸಾಗಿದ ಮನುಷ್ಯನ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
ಲಿಂ. ಶ್ರೀಶೈಲ ವಾಗೀಶ ಪಂಡಿತಾರಾಧ್ಯ ಶ್ರೀಗಳು ಮತ್ತು ಲಿಂ. ಶ್ರೀಶೈಲ ಉಮಾಪತಿ ಪಂಡಿತಾರಾಧ್ಯ ಶ್ರೀಗಳ ಗದ್ದುಗೆ ದರ್ಶನ ಪಡೆಯಲು ಇಲ್ಲಿಗೆ ಬಂದಾಗ ಅವರ ದರ್ಶನ ಭಾಗ್ಯದಿಂದ ಇಂದು ರಾಜೋಪಚಾರ ಪೂಜೆ ಪ್ರಾಪ್ತಿಯಾಗಿದೆ ಎಂದರು.
ಈ ವೇಳೆ ಶ್ರೀಶೈಲ ಶಾಸ್ತ್ರಿ, ಬಸವರಾಜ್ ಶಾಸ್ತ್ರಿ, ಬೆಳ್ಳೂಡಿ ಪ್ರಕಾಶ್, ಪರಮೇಶ್ವರಪ್ಪ, ಮುರುಗೇಶ್ ಆರಾಧ್ಯ, ಬಕ್ಕೇಶ್ ನಾಗನೂರು ಹಾಗೂ ಸಂಸ್ಕೃತ ಪಾಠ ಶಾಲಾ ಮಕ್ಕಳು ಇದ್ದರು.