ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಪಾರದರ್ಶಕವಾಗಿ ಸಿಗುವಂತಾಗಲಿ

ವಿಕಲಚೇತನರಿಗೆ ಸರ್ಕಾರಿ ಸೌಲಭ್ಯ ಪಾರದರ್ಶಕವಾಗಿ ಸಿಗುವಂತಾಗಲಿ

ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ,ಡಿ.3- ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ವಿಕಲಚೇತನರ ಪೋಷಕರು ಮೊದಲೇ ಅವರನ್ನು ಪೋಷಣೆ ಮತ್ತು ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿರುತ್ತದೆ. ಹೀಗಿರುವಾಗ ಅವರ ಸೌಲಭ್ಯಗಳು ಪಾರದರ್ಶಕವಾಗಿ ಸಿಗುವಂತಾಗಬೇಕೆಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ  ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಸ್ವಾವಲಂಬಿ ಜೀವನ ನಡೆಸಲು ಪೂರಕ ವಾತಾವ ರಣ ಕಲ್ಪಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಬೇಕೆಂದು ಮನವಿ ಮಾಡಿದರು.

ದಿವ್ಯಾಂಗ ವ್ಯಕ್ತಿಗಳಲ್ಲಿ ಶ್ರದ್ದೆ, ಬದ್ದತೆ ಹೆಚ್ಚಿದ್ದು, ಇವರ ಸರ್ವತೋಮುಖ ಅಭಿವೃದ್ಧಿಗೆ ಸರಿಯಾದ ಯೋಜನೆಗಳನ್ನು ರೂಪಿಸುವ ಅವಶ್ಯಕತೆ ಇದೆ ಎಂದರು.

ಸರ್ಕಾರ ವಿಕಲಚೇತನರಿಗಾಗಿ ತ್ರಿಚಕ್ರ ಮೋಟಾರು ಸೈಕಲ್, ಪಿಂಚಣಿ, ಬಸ್ ಪಾಸ್, ಸ್ವ ಉದ್ಯೋಗಕ್ಕೆ ಸಾಲ ಸೇರಿದಂತೆ ಹಲವಾರು ಸೌಲಭ್ಯ ಕಲ್ಪಿಸಿದೆ. ಆದರೆ ಅವರಿಗೆ ಆ ಸೌಲಭ್ಯಗಳನ್ನು ತಲುಪಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ ಎಂದರು.

ವಿಕಲಚೇತರಿಗೆ ಕೇವಲ 50 ಸಾವಿರದಿಂದ 1 ಲಕ್ಷದವರೆಗೆ ಸಾಲ-ಸೌಲಭ್ಯ ಕಲ್ಪಿಸಿದರೆ ಸಾಲಾದು, ಅವರಿಗೆ 10 ರಿಂದ 15 ಲಕ್ಷದವರೆಗೆ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡ್ಡಿ ರಹಿತ ಸಾಲ-ಸೌಲಭ್ಯ ನೀಡಿದರೆ ಅವರು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಛಲ, ಶ್ರದ್ಧೆ ಇದ್ದರೆ ಯಾವ ಕ್ಷೇತ್ರದಲ್ಲಾದರೂ ಮುಂದೆ ಬರಬಹುದು. ವಿಕಲಚೇತನರು ಸಾಲ- ಸೌಲಭ್ಯ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ವಿಕಲಚೇತನರಿಂದ ಹಣ ವಸೂಲಿ ಮಾಡುವ ಬಗ್ಗೆ ಫಲಾನುಭವಿಗಳಿಂದ ದೂರುಗಳು ಬರುತ್ತಿವೆ ಎಂಬ ಮಾಹಿತಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಹಾನಗರಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಎಎಸ್ಪಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ್,  ಅಂಗವಿಕಲರ ಕಲ್ಯಾಣಾಧಿಕಾರಿ ಡಾ. ಪ್ರಕಾಶ್, ಆಶಾಕಿರಣ ಟ್ರಸ್ಟ್ ಅಧ್ಯಕ್ಷ ರಮಣ್‍ಲಾಲ್ ಪಿ. ಸಂಘವಿ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!