2030ರ ವೇಳೆಗೆ ಏಡ್ಸ್ ಮುಕ್ತ ದೇಶ ಮಾಡಲು ಶ್ರಮಿಸೋಣ

2030ರ ವೇಳೆಗೆ ಏಡ್ಸ್ ಮುಕ್ತ ದೇಶ ಮಾಡಲು ಶ್ರಮಿಸೋಣ

ವಿಶ್ವ ಏಡ್ಸ್ ದಿನಾಚರಣೆ’ ಉದ್ಘಾಟಿಸಿದ ನ್ಯಾ.ಮಹಾವೀರ ಕರೆಣ್ಣನವರ್

ದಾವಣಗೆರೆ, ಡಿ.3- 2030ರ ವೇಳೆಗೆ ಭಾರತದಿಂದ ಏಡ್ಸ್ ಎಂಬ ಮಾರಕ ರೋಗವನ್ನು ಓಡಿಸಲು ಎಲ್ಲಾ ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್  ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಏಡ್ಸ್ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

ಏಡ್ಸ್ ಎಂಬ ಪದ ಈಗ ಜಗಜ್ಜಾಹೀರಾಗಿದೆ. ಏಡ್ಸ್ ಹೇಗೆ ಹರಡುತ್ತದೆ ಎಂಬ ಮಾಹಿತಿಯೂ ಎಲ್ಲರಿಗೆ ತಿಳಿದಿದೆ. ಆದಾಗ್ಯೂ, ಅಸಡ್ಡೆ, ನಾಚಿಕೆ, ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದಾಗಿ ಯುವಕರು ರೋಗಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಎಂದು ಹೇಳಿದರು.

ಸಾಕಷ್ಟು ಸುಧಾರಣೆಗಳ ನಡುವೆಯೂ ಸೋಂಕು ಹರಡುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅರಿತು, ಇತರರಿಗೂ ಜಾಗೃತಿ ಮೂಡಿಸ ಬೇಕು. ಈ  ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ಬಾರದಂತೆ ತಡೆಯುವುದೊಂದೇ ಮಾರ್ಗ ಎಂದರು.

ಏಡ್ಸ್ ತಡೆಗೆ ಹಾಗೂ ಏಡ್ಸ್ ಸೋಂಕಿತರಲ್ಲಿ ಭರವಸೆ ಮೂಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಕೈಗೊಂಡಿದೆ. ಇವುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಬಡವರಿಗೆ ಉಚಿತವಾಗಿ ಕಾನೂನು ಸೇವೆ ನೀಡಲಾಗುತ್ತಿದೆ. ಏಡ್ಸ್‌ ಸೋಂಕಿತರಿಗೂ ಉಚಿತವಾಗಿ ವಕೀಲರ ಸೇವೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಸೋಂಕಿತರನ್ನು ಸಾಮಾಜಿಕವಾಗಿ ದೂರವಿರಿಸುವುದು, ತಿರಸ್ಕರಿಸುವುದು ಸರಿಯಲ್ಲ.  ಹೆಚ್‍ಐವಿ ಸೋಂಕಿತರು ವೈದ್ಯರ ಸಲಹೆಯಂತೆ ಸರಿಯಾದ ಕ್ರಮದಲ್ಲಿ ನಿತ್ಯ ಔಷಧ ಸೇವನೆಯಿಂದ ಹಾಗೂ ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಸಾಮಾನ್ಯರಂತೆ ಬದುಕಬಹುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತಾನಾಡಿ,  ಸೋಂಕಿತರಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಬೆಂಬಲ ದೊರೆತಾಗ ಮಾತ್ರ, ಅವರೂ ಕೂಡ ಸಮಾಜದಲ್ಲಿ ಸಹಜ ಬದುಕು ಕಂಡುಕೊಳ್ಳಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ  ಹೆಚ್.ಐ.ವಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಡಾ.ಸಂಜಯ್, ಇಎಸ್‍ಐ ಆಸ್ಪತ್ರೆಯ ವೈದ್ಯ ಡಾ.ರಾಕೇಶ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮಧಿಕಾರಿ ಡಾ.ಪಿ.ಡಿ.ಮುರುಳೀಧರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ.ಪಿ.ಪಟಿಗೆ, ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿ ಡಾ.ಸುರೇಶ್.ಎನ್.ಬಾರ್ಕಿ ಇತರರು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಸಂಜೀವಿನಿ ಪಾಸಿಟಿವ್ ನೆಟ್ವರ್ಕ್, ಶ್ರೀ ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ, ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆ, ಜೆಪಿಎನ್‍ಜಿಎಸ್‍ಎಸ್ ಸಂಸ್ಥೆ, ಜಿಲ್ಲೆಯ ಎಲ್ಲಾ ರಕ್ತನಿಧಿ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ ಕಾಲೇಜು,  ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್, ಘಟಕ, ಜಿಲ್ಲಾ ಎನ್.ವೈ.ಕೆ ಶಿಕ್ಷಣ ಇಲಾಖೆ, ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾನಿಲಯ ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

error: Content is protected !!