ದಾವಣಗೆರೆ, ಡಿ.2- ಇದೇ ದಿನಾಂಕ 14 ರಂದು ನಡೆಯಲಿರುವ ತಾಲ್ಲೂಕು, ಜಿಲ್ಲಾ, ರಾಜ್ಯ ಸೇರಿದಂತೆ ರಾಷ್ಟ್ರದಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀಯಾಗಬಲ್ಲ ಎಲ್ಲ ಪ್ರಕರಣಗಳನ್ನು ಸಂಧಾನದ ಮೂಲಕ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳ ಬಹುದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಲು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಂಡು ಶೀಘ್ರ ಪರಿಹಾರ ಪಡೆಯಲು ಇದು ಒಂದು ಉತ್ತಮ ಅವಕಾಶವಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಲೋಕ ಅದಾಲತ್ನಲ್ಲಿ ರಾಜೀ ಆಗುವುದ ರಿಂದ ಕಕ್ಷಿದಾರ ಹಾಗೂ ನ್ಯಾಯಾಲಯದ ಸಮಯ ಹಾಗೂ ಹಣ ಉಳಿತಾಯ ಆಗುತ್ತದೆ. ಕಕ್ಷಿದಾರ ನ್ಯಾಯಾಲಯದಲ್ಲಿ ದಾವೆ ಹೂಡುವಾಗ ಪಾವತಿಸಿದ ಪೂರ್ಣ ಶುಲ್ಕವನ್ನು ರಾಜೀ ಆದ ನಂತರ ಮರು ಪಾವತಿಸಲಾಗುವುದು. ಇಬ್ಬರೂ ಪಕ್ಷಗಾರರ ಮಧ್ಯ ಇದ್ದ ದ್ವೇಷ ದೂರವಾಗಿ ಅನ್ಯೋನ್ಯವಾಗಿರುತ್ತಾರೆ ಎಂದರು.
ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 40,550 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಬಾಕಿ ಇದ್ದು ಈ ಪ್ರಕರಣಗಳಲ್ಲಿ ಒಟ್ಟು 17 ರಿಂದ 18 ಸಾವಿರ ರಾಜೀ ಆಗಬಲ್ಲ ಪ್ರಕರಣಗಳನ್ನು ಗುರುತಿಸಿ ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ.
ಸೆಪ್ಟೆಂಬರ್ ಮಾಹೆಯಲ್ಲಿ ಒಟ್ಟು 7042 ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಶೀಘ್ರ ಇತ್ಯರ್ಥಪಡಿಸಲಾಗಿತ್ತು. ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ.ಕರೆಣ್ಞನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ವಕೀಲರಾದ ನಿವೇದಿತಾ, ಬಸವರಾಜು ಗೋಪನಾಳು, ಮಂಜುನಾಥ್ ಪಾಲ್ಗೊಂಡಿದ್ದರು.