ದವನ್ ಹಾಗೂ ನೂತನ ಪದವಿ ಕಾಲೇಜುಗಳ 2024-25 ನೇ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್
ದಾವಣಗೆರೆ, ಡಿ. 1- ವಿದ್ಯಾರ್ಥಿಗಳು ಸಾಧಕ ವ್ಯಸನಿಗಳಾಗಿ, ಮಾದಕ ವ್ಯಸನಿಗಳಾಗಬೇಡಿ, ಸದಾ ಯಶಸ್ಸಿನ ಬೆನ್ನು ಹತ್ತಿ ತಮ್ಮ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಿ, ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಹೇಳಿದರು.
ನಗರದ ದವನ್ ಹಾಗೂ ನೂತನ ಪದವಿ ಕಾಲೇಜುಗಳ 2024-25 ನೇ ಸಾಲಿನ ಶೈಕ್ಷಣಿಕ ವರ್ಷಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಸಾಧನೆ ಕಡೆ ಗಮನ ಹರಿಸಬೇಕು, ಇಂದಿನ ಯುವ ಪೀಳಿಗೆ ಮಾದಕ ವ್ಯಸನಿಗಳಾಗಿ, ಮೊಬೈಲ್ ವ್ಯಸನಿಗಳಾಗಿ, ಅನೇಕ ತೆರನಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಗಣನೀಯವಾಗಿ ಹೆಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ನಿಮ್ಮ ಭವಿಷ್ಯ ರೂಪಿಸುವ ಸಮಯ ನಿಮ್ಮ ಕೈಯಲ್ಲಿದೆ ತಂದೆ, ತಾಯಿ, ಗುರುಗಳ ಮಾರ್ಗದರ್ಶನದಂತೆ ಮುನ್ನಡೆದು ಯಶಸ್ಸು ಗಳಿಸುವ ಪ್ರಯತ್ನ ಮಾಡಿ, ವಿದ್ಯಾರ್ಥಿ ಜೀವನದ ಸುಖ, ಸಂತೋಷಗಳಿಗೆ ನೂರು ವರ್ಷದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾರಂಭದ ಉದ್ಘಾಟಕರಾಗಿದ್ದ ಬೆಂಗಳೂರಿನ ಕ್ಯೂಸ್ಪೈಡರ್ಸ್ ಮತ್ತು ಜೇಸ್ಪೈಡರ್ಸ್ ಕಂಪನಿಯ ಉಪಾಧ್ಯಕ್ಷ ಎಸ್. ರವೀಶ್ ಮಾತನಾಡುತ್ತಾ, ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತವಾಗದೇ ಕೌಶಲ್ಯ ಅಭಿವೃದ್ಧಿ ಕಡೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು. ವೃತ್ತಿಪರ ಶಿಕ್ಷಣ ಕೊಡುವ ವ್ಯವಸ್ಥೆ ಕೇವಲ ಮಹಾನಗರಗಳಿಗೆ ಸೀಮಿತವಾಗಿತ್ತು.
ಆದರೆ ದವನ್ ಹಾಗೂ ನೂತನ ಕಾಲೇಜುಗಳು ಮತ್ತು ಕ್ಯೂಸ್ಪೈಡರ್ಸ್ ಕಂಪನಿಗಳ ಜೊತೆಗಿನ ಒಡಂಬಡಿಕೆಯಿಂದ ಮಧ್ಯ ಕರ್ನಾಟಕದ ವಿದ್ಯಾರ್ಥಿಗಳಿಗೆ ನಗರದಲ್ಲಿಯೇ ವೃತ್ತಿಪರ ಶಿಕ್ಷಣದ ತರಬೇತಿ ದೂರೆಯುವಂತಾಗಿದೆ. ಇತ್ತೀಚೆಗೆ ಸದರಿ ಕಾಲೇಜುಗಳ 30 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ವೃತ್ತಿಪರ ಉಚಿತ ಶಿಕ್ಷಣ ತರಬೇತಿಗೆ ಆಯ್ಕೆಯಾಗಿರುತ್ತಾರೆ. ಈಗಾಗಲೇ ಕೆಲ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳೂ ಸಹ ಲಭಿಸಿರುತ್ತವೆ ಎಂದು ಹೇಳಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಟೇಲ್ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಪ್ರತಿಭಾ ಪುರಸ್ಕಾರ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಮುಂದಿನ ವರ್ಷಗಳಲ್ಲಿ ದ್ವಿಗಣಗೊಳ್ಳಲಿ. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲಿ, ತಂದೆ-ತಾಯಿಗಳಿಗೆ ಹಾಗೂ ವಿದ್ಯಾಸಂಸ್ಥೆಗೆ ಕೀರ್ತಿ ತರಲಿ ಎಂದು ಆಶಿಸಿದರು.
ಕಾಲೇಜಿನ ಅಧ್ಯಕ್ಷ ಎನ್. ಪರಶುರಾಮನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಿಂದ ಕೊಡಮಾಡುವ ಪ್ರತಿಭಾ ಪುರಸ್ಕಾರ ನಿಮ್ಮ ಸಾಧನೆ ಮತ್ತು ಪ್ರೋತ್ಸಾಹಕ್ಕೆ ಬೆಂಬಲವಾಗಿದೆ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಗಣ್ಯರನ್ನು ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು ಸ್ವಾಗತಿಸಿದರು.
ದವನ್ ವಿದ್ಯಾ ಸಂಸ್ಥೆಯ ನಿರ್ದೇಶಕ ಹರ್ಷರಾಜ್ ಎ. ಗುಜ್ಜರ್ ರಾಂಕ್ ಪಡೆದ ವಿದ್ಯಾರ್ಥಿಗಳ ಶ್ರಮವನ್ನು ಪ್ರಶಂಸಿಸಿ, ಇತರೆ ವಿದ್ಯಾರ್ಥಿಗಳು ಇದರಿಂದ ಪ್ರೇರಿತರಾಗಬೇಕೆಂದು ಕರೆ ನೀಡಿದರು.
ಟ್ರೈನಿಂಗ್ ಹಾಗೂ ಪ್ಲೇಸ್‍ಮೆಂಟ್ ವಿಭಾಗದ ಡೀನ್ ಡಾ. ಆರ್.ಎಲ್. ನಂದೀಶ್ವರ್, ಉಪ ಪ್ರಾಚಾರ್ಯರಾದ ಪ್ರೊ. ಅನಿತಾ, ವಿಭಾಗಗಳ ಮುಖ್ಯಸ್ಥರಾದ ಪ್ರೊ. ಬಿ.ಸಿ. ಶಂಕರ್, ಪ್ರೊ. ಜಿ.ಬಿ. ಚಂದನ್ ಉಪಸ್ಥಿತರಿದ್ದರು. ಪ್ರೊ. ಟಿ. ಅಲ್ಮಾಸ್ ಬಾನು, ಪ್ರೊ. ಆರ್.ವೈ. ಶಿಲ್ಪ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಎಂ. ಸ್ಮಿತಾ ವಂದಿಸಿದರು.