ರೋಗಿಯ ಸಮಾಧಾನಕರ ಜೀವನಕ್ಕೆ ಪ್ಯಾಲಿಯೇಟಿವ್ ಕೇರ್‌ ಸಹಾಯಕ

ರೋಗಿಯ ಸಮಾಧಾನಕರ ಜೀವನಕ್ಕೆ ಪ್ಯಾಲಿಯೇಟಿವ್ ಕೇರ್‌ ಸಹಾಯಕ

ವಿವೇಕ್‌ ಪೋಷಕರ ಆರೋಗ್ಯ ಕಾರ್ಯಾಗಾರದ ಉಪನ್ಯಾಸದಲ್ಲಿ ಪ್ರಾಧ್ಯಾಪಕರಾದ ಡಾ.ಎ.ಎಂ. ಶಿಲ್ಪಶ್ರೀ

ದಾವಣಗೆರೆ, ಡಿ.1- ದೀರ್ಘಕಾಲದ ಕಾಯಿಲೆಯಿಂದ ಬಳಲುವವರು, ಪ್ಯಾಲಿಯೇಟಿವ್ ಕೇರ್‌ನಿಂದ ರೋಗದ ನೋವು, ಸಂಕಟವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಜ.ಜ.ಮು ಮೆಡಿಕಲ್‌ ಕಾಲೇಜಿನ ಪ್ರಾಧ್ಯಾಪಕಿ ಡಾ.ಎ.ಎಂ. ಶಿಲ್ಪಶ್ರೀ ತಿಳಿಸಿದರು.

ವಿವೇಕ್‌ ಪೋಷಕರ ಆರೋಗ್ಯ ಕಾರ್ಯಾಗಾರದಡಿ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ `ಪ್ಯಾಲಿಯೇಟಿವ್ ಕೇರ್‌-ಉಪಶಮನಕಾರಿ ಆರೈಕೆ’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ತೀವ್ರ ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಅಥವಾ ಶ್ವಾಸಕೋಶದ ಸಮಸ್ಯೆಗಳಿಂದಾಗಿ ರೋಗಿಯು ನೋವು ಮತ್ತು ತೊಂದರೆ ಅನುಭವಿಸುತ್ತಿರುವವರು ಔಷಧಿ ಮತ್ತು ಚಿಕಿತ್ಸೆಯ ಮೂಲಕ ನೋವನ್ನು ಕಡಿಮೆಗೊಳಿಸುವುದು ಪ್ಯಾಲಿಯೇಟಿವ್ ಕೇರ್‌ನ ಪ್ರಮುಖ ಕಾರ್ಯವಾಗಿದೆ ಎಂದು ಹೇಳಿದರು.

ಇದು ಕೇವಲ ರೋಗದ ನಿರೋಧನೆಯಲ್ಲ, ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಬೆಂಬಲವನ್ನು ಒದಗಿಸುವ ಉದ್ದೇಶವನ್ನು ಪ್ಯಾಲಿಯೇಟಿವ್ ಕೇರ್‌ ಹೊಂದಿದೆ ಎಂದು ತಿಳಿಸಿದರು.

ರೋಗಿಯ ತೊಂದರೆಗಳನ್ನು ಕಡಿಮೆ ಮಾಡುವ ಮೂಲಕ ಅವರು ಶಾಂತ ಮತ್ತು ಸಮಾಧಾನಕರ ಜೀವನ ನಡೆಸಲು ಸಹಾಯ ಮಾಡುವುದಲ್ಲದೆ, ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸಲು ಶಕ್ತಿಗೊಳಿಸಲಿದೆ ಎಂದು ಹೇಳಿದರು.

ಪಾರ್ಕಿನ್ಸನ್ಸ್ ಡಿಮೆನ್ಷಿಯಾ, ಹೃದಯ ಅಸಮರ್ಥತೆ, ಮತ್ತು ಡಯಾಬಿಟೀಸ್ ಹೀಗೆ ದೀರ್ಘಕಾಲದ ಕಾಯಿಲೆಗಳಲ್ಲಿಯೂ ಈ ಆರೈಕೆಯ ಅಗತ್ಯವಿದ್ದು, ರೋಗಿಯು ಬದುಕಿನ ತಿರುವುಗಳನ್ನು ಮತ್ತು ಮರಣದ ಭಯವನ್ನು ಎದುರಿಸಲು ಬೆಂಬಲ ನೀಡಲಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದಾಗಿ ಈ ಸೇವೆ ಎಲ್ಲರಿಗೂ ತಲುಪುತ್ತಿಲ್ಲ. 

ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಇದಕ್ಕೆ ಕಡಿಮೆ ಆದ್ಯತೆಯಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ಈ ಸೇವೆಗಳ ಅಭಾವವಿದೆ ಎಂದರು.

ಪ್ಯಾಲಿಯೇಟಿವ್ ಕೇರ್‌ ಸೇವೆಗಳು ಆರೋಗ್ಯ ಸೇವಾ ವ್ಯವಸ್ಥೆಯ ಅತ್ಯವಶ್ಯಕ ಅಂಗವಾಗಬೇಕು. ಸಾರ್ವಜನಿಕರಿಗೆ ಇದರ ಮಹತ್ವ ತಿಳಿಸಲು ಜಾಗೃತಿ ಅಭಿಯಾನಗಳು ನಡೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞರಾದ ಡಾ. ಸುರೇಶ್ ಬಾಬು, ಡಾ. ಮೃತ್ಯುಂಜಯ, ಡಾ ರೇವಪ್ಪ, ಡಾ. ಸಚಿನ್‌ ಬಾತಿ, ಡಾ. ನವೀನ್ ನಾಡಿಗ್, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!