ಲಿಂಗಾಯತ ಜಾತಿಯಲ್ಲ, ಇದೊಂದು ಶ್ರೇಷ್ಠ ಧರ್ಮ

ಲಿಂಗಾಯತ ಜಾತಿಯಲ್ಲ, ಇದೊಂದು ಶ್ರೇಷ್ಠ ಧರ್ಮ

`ದತ್ತಿ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ’ ಸಭೆಯಲ್ಲಿ ಬಸವ ಧಾಮದ ಬಸವೇಶ್ವರಿ ಮಾತಾಜಿ

ದಾವಣಗೆರೆ, ಡಿ.1- ಹನ್ನೆರಡನೇ ಶತಮಾನದಲ್ಲಿ ಹುಟ್ಟಿಕೊಂಡ ಲಿಂಗಾಯತವು ಜಾತಿಯಲ್ಲ, ಇದೊಂದು ಶ್ರೇಷ್ಠ ಧರ್ಮ ಎಂದು ಅತ್ತಿವೇರಿ ಬಸವ ಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಮೀನಾಕ್ಷಮ್ಮ, ಲಿಂ. ವೀರಭದ್ರಪ್ಪ ದತ್ತಿ ಪ್ರಯುಕ್ತ ನಗರದ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ಬಸವ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ `ದತ್ತಿ ಕಾರ್ಯಕ್ರಮ ಮತ್ತು ವಿಶೇಷ ಉಪನ್ಯಾಸ’ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜಲ್ಲಿದ್ದ ಕಂದಾಚಾರ, ಮೂಢನಂಬಿಕೆ ಮತ್ತು ಮೇಲು-ಕೀಳು ಎಂಬ ಇತರೆ ಪಿಡುಗುಗಳನ್ನು ಶೋಧಿಸಿ ಶ್ರೇಷ್ಠ ಲಿಂಗಾಯತ ಧರ್ಮ ರಚನೆಯಾಗಿದೆ ಎಂದು ಹೇಳಿದರು.

ಲಿಂಗಾಯತ ವಿಶ್ವ ಧರ್ಮ ಆಗಬೇಕಿತ್ತು. ಆದರೆ ಈ ಧರ್ಮದಲ್ಲಿ ಬರುವ 108 ಪಂಗಡದವರು ಒಬ್ಬರನ್ನೊಬ್ಬರು ದ್ವೇಷಿಸುವ ಮೂಲಕ ಧರ್ಮಕ್ಕೆ ಕಲ್ಲು ಹೊಡೆಯುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಮನಸ್ಥಿತಿಯನ್ನು ಎಲ್ಲರೂ ತ್ಯಜಿಸಬೇಕು ಎಂದು ತಿಳಿಸಿದರು.

ವಿಶ್ವಗುರು ಬಸವಣ್ಣನವರು ಚಿಕ್ಕವರಿದ್ದಾಗ ಅಸಮಾನತೆಯನ್ನು ಪ್ರಶ್ನಿಸುತ್ತಿದ್ದರು. ಇಂತಹ ಮನೋಭಾವ ಪ್ರಸಕ್ತ ದಿನಗಳಲ್ಲಿ ಯುವಕರಲ್ಲಿ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮದಲ್ಲಿ ಪುರುಷರಿಗೆ ಇರುವ ಹಕ್ಕು ಬಾಧ್ಯತೆಗಳಷ್ಟೇ ಸಮಾನ ಹಕ್ಕು ಮಹಿಳೆಯರಿಗೂ ಇದೆ. ಆದ್ದರಿಂದ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರೂ ಗುರು ಬಸವರನ್ನು ಗೌರವಿಸಿ, ಪೂಜಿಸಬೇಕೆಂದು ಮನವಿ ಮಾಡಿದರು.

ಸಮಾಜದಲ್ಲಿನ ಓರೆ-ಕೋರೆಗಳನ್ನು ಹಾಗೂ ಜನರನ್ನು ಜಾಗೃತರನ್ನಾಗಿಸಲು ವಚನ ಸಾಹಿತ್ಯ ಜನಿಸಿತು.ಹಾಗಾಗಿ ನೈಜ ವಾಸ್ತವ ಅರಿಯಲು ಎಲ್ಲರೂ ಬಸವಣ್ಣನವರ ವಚನವನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.

ಜನಗಣತಿಯಲ್ಲಿ ಮೊದಲು 21 ಪರ್ಸೆಂಟ್‌ ಇದ್ದವರು 18 ಪರ್ಸೆಂಟ್‌ ಆದರು, ನಂತರ ಶೇ.14 ಪರ್ಸೆಂಟಿಗೆ ಬಂದೆವು, ಈಗ 7-8 ಪರ್ಸೇಂಟ್‌ ಇದ್ದಾರೆ ಎಂಬ ವರದಿ ಇವೆ. ಇದಕ್ಕೆ ಮಾರಕವಾಗಿರುವವರೇ ನಾವು ಎಂದು ತಿಳಿಸಿದರು.

ಇದೇ ವೇಳೆ ದತ್ತಿ ದಾಸೋಹಿಗಳಾದ ಮಧುಮತಿ, ಗಿರೀಶ್‌ ದೇವಿಗೆರೆ ಮತ್ತು`ಶರಣರ ಶಕ್ತಿ’ ಚಲನಚಿತ್ರ ನಿರ್ದೇಶಕ ದಿಲೀಪ್ ವಿ ಶರ್ಮಾ ಅವರನ್ನು ಸನ್ಮಾನಿಸಿದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗುರು ಬಸವ ಮಂಟಪದ ಎಂ. ಹನುಮಂತಪ್ಪ ಐಗೂರು, ಬಸವ ಬಳಗದ ಎ.ಹೆಚ್‌. ಹುಚ್ಚಪ್ಪ ಮಾಸ್ತರ್‌, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಎನ್‌.ಎಸ್‌. ರಾಜು, ಗೌರವ ಸಲಹೆಗಾರ ಹೆಚ್‌.ಕೆ. ಲಿಂಗರಾಜು, ಎಂ. ಪರಮೇಶ್ವರಪ್ಪ, ಗಾಯತ್ರಿ ವಸ್ತ್ರದ್‌ ಮತ್ತಿತರರಿದ್ದರು.

error: Content is protected !!