ಕೊಮಾರನಹಳ್ಳಿ ಕೆರೆಯಲ್ಲಿ ವೈಭವದ ತೆಪ್ಪೋತ್ಸವ

ಕೊಮಾರನಹಳ್ಳಿ ಕೆರೆಯಲ್ಲಿ ವೈಭವದ ತೆಪ್ಪೋತ್ಸವ

ಗಮನ ಸೆಳೆದ ಮೆರವಣಿಗೆ, ತೆಪ್ಪೋತ್ಸವಕ್ಕೆ ಜನಸಾಗರ

ಮಲೇಬೆನ್ನೂರು, ನ.29- ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿಯ ಐತಿಹಾಸಿಕ ಕೆರೆಯಲ್ಲಿ 15 ವರ್ಷಗಳ ಬಳಿಕ ಶುಕ್ರವಾರ ಸಂಜೆ ದೀಪೋತ್ಸವ ಮತ್ತು ತೆಪ್ಪೋತ್ಸವವು ಅಪಾರ ಜನರ ಸಮ್ಮುಖದಲ್ಲಿ ಜರುಗಿತು.

ಶ್ರೀ ರಂಗನಾಥ ಆಶ್ರಮದ ಶ್ರೀ ಶಂಕರಲಿಂಗ ಭಗವಾನರು 1951 ರಲ್ಲಿ ಕೆರೆ ತುಂಬಿದಾಗ ಮೊದಲ ಬಾರಿಗೆ ತೆಪ್ಪೋತ್ಸವ ಆಚರಿಸಿದ್ದರು. ನಂತರ 2ನೇ ಬಾರಿಗೆ 2009 ರಲ್ಲಿ ಕೆರೆ ಭರ್ತಿಯಾಗಿ ಕೋಡಿ ಸಂದರ್ಭದಲ್ಲಿ ಸರ್ವ ದೇವತೆಗಳ ಸಮ್ಮುಖದಲ್ಲಿ ಕೊಮಾರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಿದ್ದರು.

ಶುಕ್ರವಾರ ಸಂಜೆ 3ನೇ ಬಾರಿಗೆ ನಡೆದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದೀಪೋತ್ಸವ ಮತ್ತು ತೆಪ್ಪೋತ್ಸವ ಹೊಸ ಇತಿಹಾಸ ನಿರ್ಮಿಸಿತು.

ತೆಪ್ಪೋತ್ಸವದ ಅಂಗವಾಗಿ ಗ್ರಾಮದ ಮುಖ್ಯ ವೃತ್ತದಿಂದ ಕೆರೆವರೆಗೆ ನಡೆದ ಕೊಮಾರನಹಳ್ಳಿ, ಮಲೇಬೆನ್ನೂರು, ಹರಳಹಳ್ಳಿ, ದಿಬ್ಬದಹಳ್ಳಿ, ಎರೆಹಳ್ಳಿ, ಹಾಲಿವಾಣ, ಕೊಪ್ಪ, ತಿಮ್ಲಾಪುರ ಗ್ರಾಮಗಳ ಗ್ರಾಮದೇವತೆಗಳ ಮೆರವಣಿಗೆಗೆ ಉಡುಪಿಯ ಚಂಡಿ ಮೇಳ, ಡೊಳ್ಳು, ಗೊಂಬೆ ಕುಣಿತ, ಕೀಲು ಕುಣಿತ, ಹಲಗೆ, ಜಾಂಜ್‌ ಮೇಳ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರಗು ತಂದವು.

ಮೆರವಣಿಗೆ ನಂತರ ಎಲ್ಲಾ ದೇವರುಗಳನ್ನು ಹರಳಹಳ್ಳಿ ಆಂಜನೇಯ ಸ್ವಾಮಿ ಕಾರ್ನೀಕ ಹೇಳುವ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ನಂತರ ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಹಾಗೂ ಶ್ರೀ ಬೀರಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಗಳನ್ನು ಹೂವಿನಿಂದ ಅಲಂಕಾರ ಮಾಡಿದ್ದ ತೆಪ್ಪದಲ್ಲಿ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದ ಬಳಿಕ ಭಕ್ತರು ಗೋವಿಂದ ಗೋವಿಂದ ಎಂಬ ಜಯಘೋಷಗಳೊಂದಿಗೆ ಪುಷ್ಪಾರ್ಚನೆ ಮಾಡುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು.

ಸಂಜೆ 6.10ಕ್ಕೆ ಪ್ರಾರಂಭವಾದ ತೆಪ್ಪೋತ್ಸವವು ಕೆರೆಯಲ್ಲಿ ಸುತ್ತಾಡಿ ನಂತರ ಕೆರೆ ಕೋಡಿ ಸ್ಥಳಕ್ಕೆ ಬಂದು ಮುಕ್ತಾಯಗೊಂಡಿತು. ವಿದ್ಯುತ್‌ ಅಲಂಕಾರದಿಂದ ಇಡೀ ಗ್ರಾಮ ಝಗಮಗಿಸುತ್ತಿತ್ತು.

ಈ ವೇಳೆ ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಜನರ ಗಮನ ಸೆಳೆದವು. ತೆಪ್ಪೋತ್ಸವ ಮುಕ್ತಾಯಗೊಳ್ಳುವ ಸಮಯದಲ್ಲಿ ಸಮುದಾಯ ಭವನದ ಮುಂಭಾಗ ಜನರ ಸಂಖ್ಯೆ ಹೆಚ್ಚಾಗಿ ನೂಕು ನುಗ್ಗಲು ಉಂಟಾಯಿತು. ಸಮುದಾಯ ಭವನದಲ್ಲಿ ಮಧ್ಯಾಹ್ನ 12 ಗಂಟೆಯಿಂದ ತಡರಾತ್ರಿವರೆಗೆ ನಿರಂತರವಾಗಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ತೆಪ್ಪೋತ್ಸವದಲ್ಲಿ ಭಾಗವಹಿಸಿದ್ದ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರು, ದೇವಸ್ಥಾನದಲ್ಲಿ ದೀಪ ಹಚ್ಚುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು. ನಂತರ ಕೆರೆಯಲ್ಲಿ ದೀಪ ಸೇವೆ ಸಲ್ಲಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ,  ಈ ಕೆರೆಗೆ ತುಂಗಭದ್ರಾ ನದಿಯಿಂದ ನೀರು ಹರಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನು ಮುಂದೆ ನಿರಂತರವಾಗಿ ನದಿ ನೀರು ಕೆರೆಗೆ ಹರಿಯಲಿದೆ.

ಈ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡುವ ಬಗ್ಗೆ ಗ್ರಾಮಸ್ಥರು ಮನವಿ ಮಾಡಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆಂದು ಪ್ರಭಾ ಭರವಸೆ ನೀಡಿದರು.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್‌, ಹರಿಹರ ಕ್ಷೇತ್ರದ ಮಾಜಿ ಶಾಸಕರಾದ ಎಸ್‌.ರಾಮಪ್ಪ, ಹೆಚ್‌.ಎಸ್‌. ಶಿವಶಂಕರ್‌, ಮುಖಂಡರಾದ ನಂದಿಗಾವಿ ಶ್ರೀನಿವಾಸ್‌, ಹನಗವಾಡಿ ವಿರೇಶ್‌, ಬಿ. ಚಿದಾನಂದಪ್ಪ, ಬಿ.ಎಂ. ವಾಗೀಶ್‌ಸ್ವಾಮಿ, ಬೆಣ್ಣೆಹಳ್ಳಿ ಹಾಲೇಶಪ್ಪ, ಚಂದ್ರಶೇಖರ್‌ ಪೂಜಾರ್‌, ಎ. ಗೋವಿಂದ ರೆಡ್ಡಿ, ಹನಗವಾಡಿ ಕುಮಾರ್‌, ವೈ. ದ್ಯಾವಪ್ಪರೆಡ್ಡಿ, ಜಿ. ಮಂಜುನಾಥ್ ಪಟೇಲ್‌, ಐರಣಿ ಅಣ್ಣಪ್ಪ, ಎಸ್‌.ಜಿ. ಪರಮೇಶ್ವರಪ್ಪ, ಕುಂಬಳೂರು ವಿರೂಪಾಕ್ಷಪ್ಪ, ಜಿಗಳಿ ಆನಂದಪ್ಪ, ಹಿಂಡಸಘಟ್ಟಿ ಲಿಂಗರಾಜ್‌, ಶ್ರೀಮತಿ ಅರ್ಚನಾ ಬೆಳ್ಳೂಡಿ ಬಸವರಾಜ್‌, ನಿಖಿಲ್‌ ಕೊಂಡಜ್ಜಿ, ಗೋವಿನಹಾಳ್‌ ರಾಜಣ್ಣ, ಶಾಸಕ ಬಿ. ಪಿ. ಹರೀಶ್‌ ಅವರ ಪುತ್ರ ಅರ್ಜುನ್‌, ಪ್ರವಾಸೋದ್ಯಮ ಇಲಾಖೆಯ ಸಹಾಯಕ ಸಹಾಯಕ ನಿರ್ದೇಶಕರಾದ ಶ್ರೀಮತಿ ಕಾವ್ಯ, ಉಪತಹಶೀಲ್ದಾರ್‌ ಆರ್‌. ರವಿ, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಗ್ರಾಮದ ಹುಗ್ಗಿ ರಂಗನಾಥ್‌, ಐರಣಿ ಮಹೇಶ್ವರಪ್ಪ, ರಾಮಣ್ಣ ಸ್ವಾಮಿ, ಕೆ. ಉಜ್ಜೇಶ್‌, ಎಸ್‌.ಎಂ. ಮಂಜುನಾಥ್‌, ಮಡಿವಾಳರ ಬಸವರಾಜ್‌, ಸಿ. ರಂಗನಾಥ್‌, ದಾನಪ್ಳ ಅರುಣ್‌, ನವೀನ್‌ ಪಟೇಲ್‌, ಪರಮೇಶ್ವರನಾಯ್ಕ್‌, ಪಾರಿ ರಂಗಪ್ಪ, ಮತ್ತು ಮಲೇಬೆನ್ನೂರಿನ ಸುರೇಶ್‌ಶಾಸ್ತ್ರಿ, ಚಿಟ್ಟಕ್ಕಿ ನಾಗರಾಜ್‌, ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಉದಯೋನ್ಮುಖ ನಟ ಶಾಮನೂರಿನ ಪೃಥ್ವಿ ಕೂಡಾ ಪಾಲ್ಗೊಂಡು ಗಮನ ಸೆಳೆದರು. ಪಿಎಸ್‌ಐ ಪ್ರಭು ಕೆಳಗಿನಮನೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ತೆಪ್ಪೋತ್ಸವದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಿಂದ 2 ಬೋಟ್‌ಗಳನ್ನು ಕೆರೆಯಲ್ಲಿ ಬಿಡಲಾಗಿತ್ತು.

error: Content is protected !!