ಜಗಳೂರು, ನ.29- ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಶಾಂತಮ್ಮ ಎಂಬುವರಿಗೆ ಸೇರಿದ 1.35 ಎಕರೆಯಲ್ಲಿ ಬೆಳೆದಿದ್ದ 650 ಅಡಿಕೆ ಮರಗಳ ತೋಟಕ್ಕೆ ಶುಕ್ರವಾರ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ನಾಶವಾಗಿರುವ ಘಟನೆ ನಡೆದಿದೆ.
ಮಧ್ಯಾಹ್ನ 12.30ರ ಸುಮಾರಿಗೆ ಬೋರ್‍ವೆಲ್ ಆನ್ ಆಗುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಬೆಂಕಿ ತಗುಲಿದೆ. ತೋಟಕ್ಕೆ ಕಳೆ ನಾಶಕ ಸಿಂಪಡಿಸಿದ್ದರಿಂದ ಹುಲ್ಲು, ಗಿಡ ಗಂಟಿಗಳು ಒಣಗಿದ್ದವು . ಹೀಗಾಗಿ ವಿದ್ಯುತ್ ಬಂದ ತಕ್ಷಣ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿದೆ. ತಕ್ಷಣ ಸುತ್ತಮುತ್ತಲಿನ ರೈತರು ಸೇರಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರೂ ಸಹ ಪರಿಸ್ಥಿತಿ ಕೈಮೀರಿ ಇಡೀ ತೋಟವೇ ಸುಟ್ಟು ಕರಕಲಾಗಿದೆ ಎಂದು ಕೆ.ಎನ್.ಬಸವನಗೌಡ ಕಣ್ಣೀರು ಹಾಕಿದರು.
ಮೂರು ವರ್ಷಗಳಿಂದ ಬೆಳಸಲಾಗಿದ್ದ ಅಡಿಕೆ ತೋಟ ಘಟನೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು ಎಂದು ಗೋಳಾಡಿದ ದೃಶ್ಯ ಮನ ಕಲಕುವಂತಿತ್ತು.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಬೆಸ್ಕಾಂ ಎಇಇ ಸುಧಾಮಣಿ, ಎಸ್‍ಒ ರಂಗನಾಥ್, ಪರಿಶೀಲನೆ ನಡೆಸಿದರು.
ವಿದ್ಯುತ್ ಮೇನ್ ವೈಯರ್ ಕಟ್ ಆಗಿದ್ದರೆ ಅದು ಬೆಸ್ಕಾಂ ಜವಾಬ್ದಾರಿಯಾಗಿರುತ್ತಿತ್ತು. ಸ್ಟಾಟರ್ ಡಬ್ಬಿಯಿಂದ ಮೋಟಾರ್‍ಗೆ ಸಂಪರ್ಕಿಸುವ ಔಟ್‍ಪುಟ್ ಸಪ್ಲೇಯ ವೈಯರ್ ಬ್ಲಾಸ್ಟ್‍ನಿಂದ ವಿದ್ಯುತ್ ಅವಘಡವಾದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಇಲಾಖೆಯಿಂದ ತಪ್ಪಾಗಿಲ್ಲ. ಪರಿಹಾರ ಕೊಡಲು ಬರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
ಶಾಸಕ ಬಿ.ದೇವೇಂದ್ರಪ್ಪ, ಅವಘಡ ಆಗಿರುವುದು ನಿಜ. ಮಾನವೀಯ ದೃಷ್ಟಿಯಿಂದ ಪರಿಗಣಿಸಿ. ಇಲಾಖೆ ನಿಯಮಗಳ ಅನುಸಾರ ನೊಂದ ರೈತನಿಗೆ ಪರಿಹಾರ ನೀಡಿ ಎಂದು ಸೂಚನೆ ನೀಡಿದ್ದಾರೆ.
ಕಂದಾಯ,ಇಲಾಖೆ ಧನಂಜಯ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶಂಕರ್, ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.