ಅರಿವು ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷ ಶಾಮನೂರು ಬಸವರಾಜ್
ದಾವಣಗೆರೆ, ನ.29 – ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರವು ಯುವನಿಧಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದು, ಇದು ಯುವ ಸಮೂಹಕ್ಕೆ ಆರ್ಥಿಕ ಬಲ ನೀಡಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಹೇಳಿದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಾಗೂ ಎ.ವಿ. ಕಮಲಮ್ಮ ಮಹಿಳಾ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಿಪ್ಲೋಮಾ ಹಾಗೂ ಪದವಿ ಪೂರೈಸಿಕೊಂಡು ಉದ್ಯೋಗ ಸಿಗಲಾರದೆ, ಸಂದರ್ಶನಗಳಿಗೆ ಹಾಜ ರಾಗಲು ಹಣಕಾಸಿನ ತೊಂದರೆ ಇರುವ ಕುರಿತಂತೆ ಸರ್ಕಾರ ಗಮನಿಸಿದ್ದು, ಅಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಪ್ರಸ್ತುತ ಸ್ಫರ್ಧಾತ್ಮಕ ಯುಗದಲ್ಲಿ ಹಲವಾರು ಸ್ಫರ್ಧಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಹಣಕಾಸಿನ ಅವಶ್ಯಕತೆ ತುಂಬಾ ಮುಖ್ಯ, ಹಾಗಾಗಿ ಈ ಯೋಜನೆಯನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಡಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ನಂಜಾನಾಯ್ಕ, ಅನಿಸ್ ಪಾಷ, ಸದಸ್ಯರಾದ ಶಿವಶಂಕರ ಕೈದಾಳೆ, ಡೋಲಿಚಂದ್ರು ಮತ್ತು ಎಸ್.ಎಸ್. ಗಿರೀಶ್ ಹಾಗೂ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕಮಲ ಸೊಪ್ಪಿನ್, ಉಪನ್ಯಾಸಕರಾದ ಪಾರ್ವತಿ ಅಲ್ಲೊಳ್ಳಿ, ಆರ್.ಆರ್. ಶಿವಕುಮಾರ್, ಉಷಾ ಎಂ.ಆರ್, ಡಾ ಕವಿತಾ ಆರ್.ಜಿ. ಅನ್ವರ್ ಬೆಟಗೇರಿ, ಡಾ ರಣಧೀರ್ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಮಲ್ಲಿಕಾರ್ಜುನ್. ಎಸ್, ಧನಂಜಯ ಬಿ.ಎನ್. ಉಪಸ್ಥಿತರಿದ್ದರು.