ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ದಾವಣಗೆೆರೆ, ನ. 27- ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಹಾಗೂ ದ್ವಿತೀಯ ಪಿಯುಸಿ ಕನ್ನಡ ಭಾಷೆಯಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮಹಾನಗರ ಪಾಲಿಕೆಯಿಂದ ಗೌರವಿಸುವ ಕಾರ್ಯ ಶ್ಘಾಘನೀಯವಾದುದು. ಇದರ ಮೂಲಕ ಪಾಲಿಕೆ ಕನ್ನಡ ರಾಜ್ಯೋತ್ಸವ ಹೊಸ ತಿರುವು ಪಡೆದುಕೊಂಡಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಮಹಾನಗರ ಪಾಲಿಕೆ ಮತ್ತು ಪತ್ರಕರ್ತರ ಸಹ ಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಗಳಿಗೆ ಇಂದು ಏರ್ಪಡಿಸಿದ್ದ ಅಭಿ ನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಮೆಡಿಕಲ್ ಮುಂತಾದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಮೂಲಕ ಇನ್ನೂ ಉತ್ತಮ ಸಾಧನೆ ಮಾಡಿ, ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸಿದರು.
ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಮಾತನಾಡಿ, ಪ್ರತಿ ವರ್ಷಕ್ಕಿಂತ ಈ ಬಾರಿ ವಿಭಿನ್ನವಾಗಿ ರಾಜ್ಯೋತ್ಸವ ಆಚರಿಸಬೇಕೆಂಬ ಸದುದ್ಧೇಶದಿಂದ ಪ್ರಥಮ ಬಾರಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಕೆಲಸವನ್ನು ಮಾಡಿರುವುದು ಹರ್ಷ ತಂದಿದೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಈ ಶತಮಾನದ ಮಹಾಪುರುಷರು ಎಂದು ಹೇಳಿದರೆ ತಪ್ಪಾಗಲಾ ರದು. ಆಡು ಮುಟ್ಟದ ಸೊಪ್ಪಿಲ್ಲ ಶಿವಶಂಕರಪ್ಪ ಸಲ್ಲಿಸದ ಸೇವಾ ಕ್ಷೇತ್ರಗಳಿಲ್ಲ. ಶಿಕ್ಷಣ, ಆರೋಗ್ಯ, ಸಮಾಜ ಸೇವೆ, ಧಾರ್ಮಿಕ ಸೇರಿದಂತೆ ಇನ್ನೂ ಆನೇಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆಂದು ಪ್ರಶಂಸಿಸಿದರು.
ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮಾಶಂಕರ್, ಎಲ್.ಡಿ. ಗೋಣೆಪ್ಪ, ಎಲ್.ಎಂ.ಹೆಚ್. ಸಾಗರ್, ಎನ್. ನೀಲಗಿರಿಯಪ್ಪ, ಕನ್ನಡ ಪರ ಹೋರಾಟಗಾರ ಕೆ.ಜಿ. ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.