ಸಾರ್ವಜನಿಕ ಸ್ಥಳಗಳಲ್ಲಿ ಕಲಾ ಪ್ರದರ್ಶನ, ಮಾರಾಟ ನಡೆಸಲು ಪ್ರೊ.ಕುಂಬಾರ ಸಲಹೆ
ದಾವಣಗೆರೆ, ನ. 27- ದೃಶ್ಯಕಲಾ ಮಹಾವಿ ದ್ಯಾಲಯದಲ್ಲಿ ನಡೆಯುವ ಕಲಾ ಪ್ರದರ್ಶನಗಳು ಜನರನ್ನು ತಲುಪಬೇಕಾದರೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇಂದಿನಿಂದ ಡಿಸೆಂಬರ್ 6ರವರೆಗೆ ನಡೆಯಲಿರುವ `ಶಿಲ್ಪಕಲಾ’ ಸಮಕಾಲೀನ ಸಮೂಹ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳದಲ್ಲಿ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳು ನಡೆಯಬೇಕು. ಆಗ ಕಲೆಗೆ ಉತ್ತಮ ಬೆಲೆಯೂ ದೊರೆಯುತ್ತದೆ. ಸಮಾಜಕ್ಕೆ ಕೊಡುಗೆಯನ್ನೂ ನೀಡಿದಂತಾಗುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಕಲುಷಿತಗೊಳ್ಳುತ್ತಿರುವ ಸಮಾಜವನ್ನು ಯಾರು ಸರಿಪಡಿಸಬೇಕು? ಎಂಬ ಪ್ರಶ್ನೆಗೆ `ಕಲಾವಿದರಿಂದ ಮಾತ್ರ ಸಾಧ್ಯ’ ಎಂಬ ಉತ್ತರ ಈ ಕಲಾಕೃತಿಗಳ ಪ್ರದರ್ಶನದ ಮೂಲಕ ಕಂಡುಕೊಳ್ಳಬಹುದಾಗಿದೆೆ ಎಂದರು.
ದೇಶದ ಆರ್ಥಿಕತೆ ಹೆಚ್ಚಿಸುವಲ್ಲಿ ಛಾಯಾಚಿತ್ರಗಳು, ಶಿಲ್ಪ ಕಲಾಕೃತಿಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹಿರಿಯ ಪತ್ರಕರ್ತ, ಕಲಾವಿದ ಡಾ.ಹೆಚ್.ಬಿ.ಮಂಜುನಾಥ್ ಹೇಳಿದರು.
ಕಲಾವಿದ ಹಾಗೂ ಯಮರಾಜ…
ನೈಜ ಮನುಷ್ಯರಂತೆಯೇ ಶಿಲ್ಪಿಗಳನ್ನು ತಯಾರಿಸುತ್ತಿದ್ದ ಕಲಾವಿದರಿಗೆ ಜ್ಯೋತಿಷಿಯೊಬ್ಬ ನಿನ್ನ ಸಾವು ಸನಿಹಕ್ಕೆ ಬಂದಿದೆ ಎಂದು ತಿಳಿಸಿದ.
ಕಲಾವಿದ ಸಾವಿನಿಂದ ತಪ್ಪಿಸಿಕೊಳ್ಳಲು ಉಪಾಯ ಹುಡುಕುತ್ತಾ, ಯಮರಾಜ ಹಾಗೂ ಚಿತ್ರಗುಪ್ತ ಬರುವ ಸಮಯದಲ್ಲಿ ತನ್ನಂತೆಯೇ ಇರುವ 99 ಕಲಾಕೃತಿಗಳನ್ನು ರಚಿಸಿ, ತಾನೂ ಅದರೊಳಗೊಂದಾಗಿ ನಿಂತುಕೊಂಡ.
ಯಮರಾಜನಿಗೆ ಆ ಶಿಲ್ಪಿಗಳ ನಡುವೆ ನಿಜವಾದ ಕಲಾವಿದನನ್ನು ಹುಡುಕುವುದು ಕಷ್ಟವಾಯಿತು. ಆಗ ಉಪಾಯವೊಂದನ್ನು ಮಾಡಿದ. ಈ ಶಿಲ್ಪಗಳು ತುಂಬಾ ಅದ್ಭುತವಾಗಿವೆ. ಇವುಗಳನ್ನು ನಿರ್ಮಿಸಿದ ಕಲಾವಿದ ಸಿಕ್ಕರೆ ಅವನಿಗೆ ಪ್ರಣಾಮ ಮಾಡಿ, ಸತ್ಕರಿಸಬಹುದಾಗಿತ್ತು ಎಂದು ಚಿತ್ರಗುಪ್ತನಿಗೆ ಹೇಳಿದ.
ಆಗ ಕಲಾವಿದ ಕೂಡಲೇ ನಾನೇ ಮಾಡಿದ್ದು ಎಂದ. ಯಮರಾಜನಿಗೆ ಖುಷಿಯಾಗಿ, ಕಲಾವಿದನ ಪ್ರಾಣ ಕೊಂಡೊಯ್ದ.
ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಅವರು ಈ ಕಥೆ ಹೇಳುತ್ತಾ, ಕಲಾವಿದರಿಗೆ ಅಹಂ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚೆಗೆ ಶಿಲ್ಪ ಕಲಾಕೃತಿಯೊಂದು ಹರಾಜಿನ ಮೂಲಕ 10 ಬಿಲಿಯನ್ ಡಾಲರ್ಗೆ ಮಾರಾಟವಾಗಿತ್ತು. ಈ ರೀತಿ ಹೆಚ್ಚು ಹಣಕ್ಕೆ ಕಲಾಕೃತಿಗಳು ಮಾರಾಟವಾದಾಗ ಇದು ದೇಶದ ಆರ್ಥಿಕತೆ ಹೆಚ್ಚಳಕ್ಕ ಸಹಕಾರಿಯಾಗುತ್ತದೆ ಎಂದರು.
ವೇದ, ಆಗಮಗಳಲ್ಲಿ, ಮಹಾ ಕಾವ್ಯಗಳಾದ ರಾಮಾಯಣ-ಮಹಾಭಾರತದಲ್ಲಿ ಶಿಲ್ಪ ಕಲೆಗಳ ಪ್ರಸ್ತಾಪವಿದೆ. ಶಿಲ್ಪ ಕಲೆ ವಿಚಾರದಲ್ಲಿ ಶಿಲ್ಪಿ ವಿಶ್ವಕರ್ಮನನ್ನು ಇಂದ್ರನಿಗೆ ಸಮನಾದ ಸ್ಥಾನ ಕೊಟ್ಟ ದೇಶ ನಮ್ಮದು. ಆ ಕಾಲದಿಂದಲೂ ಶಿಲ್ಪಕಲೆ ಸಮಕಾಲೀನ ಶಿಲ್ಪವಾಗಿತ್ತು. ಈಗ ಸಾಂಪ್ರದಾಯಿಕ ಶಿಲ್ಪಕಲೆಯಾಗಿದೆ ಎಂದು ಹೇಳಿದರು.
ಹೊಸ ಪ್ರಯೋಗ, ಪ್ರೋತ್ಸಾಹಗಳ ಮೂಲಕ ರಾಜ್ಯದ ಏಕೈಕ ಸರ್ಕಾರಿ ಕಲಾ ಕಾಲೇಜಾಗಿದ್ದ ದೃಶ್ಯಕಲಾ ಮಹಾವಿದ್ಯಾಲಯವು, ಈಗ ಬೇರೆಲ್ಲಾ ಕಲಾ ಕಾಲೇಜುಗಳಿಗಿಂತ ಹೆಚ್ಚಾಗಿ ಪ್ರಶಂಸೆಗೊಳ ಪಡುವಂತಹ ಕೆಲಸ ಮಾಡುತ್ತಿದೆ ಎಂದರು.
ದೃಶ್ಯ ಕಲಾ ಮಹಾವಿದ್ಯಾಲಯದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ಸರ್ಕಾರದ ಮಟ್ಟದಲ್ಲಿ ವ್ಯವಹಾರ ನಡೆಸುವಂತೆ, ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ಇದೇ ಸಂದರ್ಭದಲ್ಲಿ ದಾವಿವಿ ಕುಲಪತಿಗಳಿಗೆ ಹೇಳಿದರು.
ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೈರಾಜ್ ಎಂ.ಚಿಕ್ಕಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಮಹಾವಿದ್ಯಾಲಯವು ವಜ್ರಮಹೋತ್ಸವ ಆಚರಿಸಿಕೊಳ್ಳುತ್ತಿರುವ ನಿಟ್ಟಿನಲ್ಲಿ 2024ರ ಏಪ್ರಿಲ್ನಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಅದರ ಭಾಗವಾಗಿ ಶಿಲ್ಪಕಲಾ ಪ್ರದರ್ಶನ ಏರ್ಪಡಿಸಿದೆ ಎಂದರು.
ಕಲಾವಿದರುಗಳಾದ ಡಾ.ಎಂ.ಕೆ. ಗಿರೀಶ್ ಕುಮಾರ್, ಓಂಕಾರಮೂರ್ತಿ, ನವೀನ್ ಕುಮಾರ್ ಎ. ಮಾತನಾಡಿದರು. ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ನಿವೃತ್ತ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ, ಹಿರಿಯ ಕಲಾವಿದರುಗಳಾದ ಮಹಾಲಿಂಗಪ್ಪ, ಚಂದ್ರಶೇಖರ ಎಸ್. ಸಂಗಾ ಉಪಸ್ಥಿತರಿದ್ದರು.
ದತ್ತಾತ್ರೇಯ ಎನ್. ಭಟ್ ನಿರೂಪಿಸಿದರು. ಕು.ನವ್ಯಾ ಪ್ರಾರ್ಥಿಸಿದರು. ಐಕ್ಯೂಎಸಿ ಸಂಯೋಜನಾಧಿಕಾರಿ ಡಾ.ಸತೀಶಕುಮಾರ್ ಪಿ.ವಲ್ಲೇಪುರೆ ಉಪಸ್ಥಿತರಿದ್ದು, ವಂದಿಸಿದರು.