ಅಂಗವೈಕಲ್ಯ ಬದಿಗೊತ್ತಿ ಕ್ರೀಡೆಯಲ್ಲಿ ಪಾಲ್ಗೊಂಡ ವಿಕಲಚೇತನರು

ಅಂಗವೈಕಲ್ಯ ಬದಿಗೊತ್ತಿ  ಕ್ರೀಡೆಯಲ್ಲಿ ಪಾಲ್ಗೊಂಡ ವಿಕಲಚೇತನರು

ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ನಡೆದ ಕ್ರೀಡಾಕೂಟ

ದಾವಣಗೆರೆ, ನ.26-  ವಿಶ್ವ ವಿಕಲ ಚೇತನರ ದಿನಾ ಚರಣೆ ಅಂಗವಾಗಿ ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಮಂಗಳವಾರ  ವಿಕಲಚೇತನರಿಗಾಗಿ ಏರ್ಪ ಡಿಸಿದ್ದ  ಕ್ರೀಡಾಕೂಟ ಜನಮನ ಸೆಳೆಯಿತು.

ನಡೆಯಲು ಸಾಧ್ಯವಾಗದ, ಕಣ್ಣು ಕಾಣಿಸಿದ, ಕಿವಿ ಕೇಳಿಸದ, ಮಾತು ಬಾರದ, ಅಂಗಾಂಗ ಊನವಾಗಿರುವ 200ಕ್ಕೂ ಹೆಚ್ಚು ಮಂದಿ ವಿಕಲಚೇತನರು ಕ್ರೀಡಾಕೂಟದಲ್ಲಿ ಭಾಗವಹಿಸಿ, ಉತ್ಸಾಹದಿಂದ ನಾನಾ ಆಟೋಟ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು.

ವಾಕ್ ಮತ್ತು ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ 100 ಮೀಟರ್ ಮತ್ತು 200 ಮೀಟರ್ ಓಟ, ಜಾವಲಿನ್ ಥ್ರೋ, ಕೇರಂ, ಚೆಸ್, ಶಾರ್ಟ್‌ಪುಟ್  ಸ್ಪರ್ಧೆಗಳನ್ನು ನಡೆಸಲಾಯಿತು. 

ದೈಹಿಕ ವಿಕಲಚೇತನರಿಗೆ ನಿಧಾನಗತಿ ಬೈಕ್ ರೇಸ್, ಶಾಟ್ ಪುಟ್, ಜಾವಲಿನ್ ಥ್ರೋ, ಮ್ಯೂಸಿಕಲ್ ಚೇರ್ . ಸಂಪೂರ್ಣ ದೃಷ್ಟಿದೋಷವುಳ್ಳವರಿಗೆ 50 ಮೀಟರ್ ರನ್ನಿಂಗ್ ರೇಸ್, ಶಾಟ್‌ಪುಟ್, ಮ್ಯೂಸಿಕಲ್ ಚೇರ್, ಚೆಸ್ ಹಾಗೂ  ಭಾಗಶಃ ಅಂಧರಿಗೆ ಕೇರಂ ಸ್ಪರ್ಧೆಗಳು. ಬೆನ್ನುಹುರಿ ಅಪಘಾತ ಹೊಂದಿದವರಿಗೆ ಚೆಸ್, ಕೇರಂ, ವ್ಹೀಲ್ ಚೇರ್ ರೇಸ್ ಸ್ಪರ್ಧೆಗಳು ನಡೆದವು.

ಅಪರ ಜಿಲ್ಲಾಧಿಕಾರಿ ಬಿ.ಎನ್. ಲೋಕೇಶ್ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ವಿಕಲಚೇತನ ರಲ್ಲಿರುವ ಪ್ರತಿಭೆ, ಕೌಶಲ್ಯಗಳನ್ನು ಪ್ರೋತ್ಸಾಹಿಸಲು ಕ್ರೀಡಾ ಕೂಟ ಆಯೋಜಿಸುತ್ತಿರುವುದು ಶ್ಲ್ಯಾಘನೀಯ ಎಂದರು. ಸ್ಪರ್ಧಾಳುಗಳಿಗೆ ಸೋಲು-ಗೆಲುವು ಸಹಜ. ಸಕಾರಾತ್ಮಕ ಧೋರಣೆಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಸೋತರೆ ನೊಂದುಕೊಳ್ಳದೆ, ಕ್ರೀಡಾ ಸ್ಪೂರ್ತಿಯಿಂದ ಗೆದ್ದವರನ್ನು ಅಭಿನಂದಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೋತಿ ವೀರಪ್ಪ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪಂಚಾಕ್ಷರಪ್ಪ ಮಾತನಾಡಿ, ಅಂಗವೈಕಲ್ಯವನ್ನು ಶಾಪ ಎಂದು ತಿಳಿದುಕೊಳ್ಳದೆ ಛಲದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಅನೇಕ ವಿಕಲಚೇತನರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಖ್ಯಾತರಾಗಿದ್ದಾರೆ. ಅವರಂತೆಯೇ ನೀವೂ ಸಹ ಕೀಳರಿಮೆ ತೊರೆದು ಕ್ರೀಡೆಯಲ್ಲಿ ಪಾಲ್ಗೊಳ್ಳಿ ಎಂದು ಕಿವಿ ಮಾತು ಹೇಳಿದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್,  ದಾವಣಗೆರೆ ದಕ್ಷಿಣ ವಲಯದ ದೈಹಿಕ ಶಿಕ್ಷಣಾಧಿಕಾರಿ ವಿಜಯಕುಮಾರ್, ಉತ್ತರ ವಲಯದ ದೈಹಿಕ ಶಿಕ್ಷಣಾಧಿಕಾರಿ ಮೊಹಮ್ಮದ್ ಹುಸೇನ್, ಪರಶುರಾಮ ಗೌಡ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸ್ವಾಗತಿಸಿದರು. 

error: Content is protected !!