ದಾವಣಗೆರೆ, ನ. 26- ಕಳೆದ ವರ್ಷ ಬರದಿಂದ ಕಳೆಗುಂದಿದ್ದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಈ ಬಾರಿಯ ಉತ್ತಮ ಮಳೆಯಿಂದಾಗಿ ಜೀವಕಳೆ ಬಂದಿದೆ. ಸುಗ್ಗಿಯ ಕಾಲ ಆರಂಭವಾಗಿದ್ದು, ದಿನೇ ದಿನೇ ಮಾರುಕಟ್ಟೆಗೆ ಅವಕ ಹೆಚ್ಚಾಗುತ್ತಿದೆ. ಎಲ್ಲಿ ನೋಡಿದರೂ ಭತ್ತ ಹಾಗೂ ಮೆಕ್ಕೆಜೋಳದ ರಾಶಿಗಳು ಕಾಣುತ್ತಿವೆ. ಉತ್ಪನ್ನಗಳಿಗೆ ಉತ್ತಮ ಬೆಲೆ ಇರುವ ಕಾರಣ ರೈತರೂ ಸಹ ಖುಷಿಯಿಂದಲೇ ಬೆಳೆಯೊಂದಿಗೆ ಎಪಿಎಂಸಿಗೆ ದಾಂಗುಡಿ ಇಡುತ್ತಿದ್ದಾರೆ.
ಪುರುಷ, ಮಹಿಳೆ ಎನ್ನದೆ ಹಮಾಲರು ಬಿಡುವಿಲ್ಲದೆ ದುಡಿಮೆ ಯಲ್ಲಿ ಮಗ್ನರಾಗಿದ್ದಾರೆ. ಚಹಾ ಅಂಗಡಿಗಳು, ಹೋಟೆಲ್ಗಳು, ಗೋಣಿಚೀಲ ವ್ಯಾಪಾರ, ಲಾರಿ ಮಾಲೀಕರು ಹೀಗೆ ಎಲ್ಲರಿಗೂ ಎಪಿಎಂಸಿ ಅನ್ನ ನೀಡುತ್ತಿದೆ. ದಲ್ಲಾಳಿಗಳೂ ಸೇರಿದಂತೆ ಸದ್ಯ ಎಲ್ಲರ ಮುಖದಲ್ಲೂ ಮಂದಹಾಸವಿದೆ.