ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಪ್ರವಾಸ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ದಾವಣಗೆರೆ, ನ.26- ರಾಜ್ಯದ 224 ವಿಧಾನಸಭಾ ಕ್ಷೇತ್ರ ಗಳಲ್ಲೂ ಸಂಚರಿಸಿ, ಪಕ್ಷವನ್ನು ಮತ್ತಷ್ಟು ಬಲಾಢ್ಯಗೊಳಿಸಲಾಗುವುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು.
ಸಮೀಪದ ಶಿರಮಗೊಂಡನಹಳ್ಳಿ ಬಳಿ ಇರುವ ಶ್ರೀಮತಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಮಾಜಿ ಸಿಎಂ, ಬಿಜೆಪಿ ಧುರೀಣ ಎಸ್.ಎ. ರವೀಂದ್ರನಾಥ್ ಅವರ 79ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಪ್ರತಿ ದಿನ ಕನಿಷ್ಠ ಎರಡರಿಂದ ಮೂರು ತಾಲ್ಲೂಕುಗಳಿಗೆ ಭೇಟಿ ನೀಡಿ ಪಕ್ಷದ ಬಲವರ್ಧನೆಗೆ ಅವಿರತ ಶ್ರಮಿಸುವುದಾಗಿ ಹೇಳಿದ ಅವರು, ಸೋತಿದ್ದೇವೆಂದು ಮನೆಯಲ್ಲಿಯೇ ಕೂರದೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವ ಮೂಲಕ ಈ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.
ರವೀಂದ್ರನಾಥ್ ಮತ್ತು ನನ್ನೊಂದಿಗಿನ ನಂಟು ಹಲವು ದಶಕಗಳದ್ದು, ಅಂದಿನಿಂದ ಇಂದಿನವರೆಗೆ ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ತುಂಬಾ ಹತ್ತಿರದಿಂದ ಅವರನ್ನು ಬಲ್ಲೆ. ಕೇವಲ ಅಧಿಕಾರಕ್ಕಾಗಿ ಸಾರ್ವಜನಿಕ ಜೀವನಕ್ಕೆ ಬಂದವರಲ್ಲ. ಜನಸೇವೆಗಾಗಿ ಬಂದವರು. ಅವರ ಬದುಕಿನ ಮೌಲ್ಯ, ಆದರ್ಶ, ಅನುಭವ ಮಾರ್ಗದರ್ಶನವಾಗಲಿ ಎಂದರು.
ಪಕ್ಷದ ಸಿದ್ಧಾಂತ, ಮೌಲ್ಯಕ್ಕೆ ಬದ್ಧರಾಗಿ ಜನಸೇವೆ ಮಾಡಿ ಹೆಸರು ಗಳಿಸಿದವರು.ಇಂತಹ ಜನಾನುರಾಗಿ ನೇತಾರರು ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ವಿರಳ. ಅಂತವರಲ್ಲಿ ರವೀಂದ್ರನಾಥ್ ಒಬ್ಬರು ಎಂದು ಅವರ ಸೇವಾ ಕಾರ್ಯಗಳನ್ನು ಕೊಂಡಾಡಿದರು.
ನೀರಾವರಿ ಯೋಜನೆ ಜಾರಿಗಾಗಿ ಅವಿರತ ಶ್ರಮಿಸಿದವರು. ಭದ್ರಾ ನೀರಿಗಾಗಿ ದಿಟ್ಟ ಹೋರಾಟ ಮಾಡಿದವರು. ಅವರ ದಿಟ್ಟತನ, ದಕ್ಷ ಆಡಳಿತವನ್ನು ಮೆಚ್ಚಿಕೊಂಡಿದ್ದರಿಂದಲೇ ಇಷ್ಟೊಂದು ಅಭಿಮಾನಿಗಳು ನೆರೆದಿದ್ದಾರೆ ಎಂದು ಹೇಳಿದರು.
`ಭಾರತದ ಸಂವಿಧಾನ’ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿ ಧಾನವಾಗಿದೆ. ಅಂಬೇಡ್ಕರ್ ಸಂವಿಧಾನ ಇರುವುದರಿಂದಲೇ ಪ್ರಜಾ ಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಿದೆ. ಸಂವಿಧಾನ ನೀಡಿದ ಹಕ್ಕುಗಳಿಂದಲೇ ರಾಜಕೀಯವಾಗಿ ಉನ್ನತ ಸ್ಥಾನಮಾನದ್ದಲ್ಲಿದ್ದೇವೆ. ಸಂವಿಧಾನದ ದಿನದಂದು ರವೀಂದ್ರನಾಥ ಅವರ ಜನ್ಮದಿನ ಆಚರಿಸುತ್ತಿರುವುದು ಸಂತಸ ತಂದಿದೆ. ಅವರ ಸರಳ, ಸಜ್ಜನಿಕೆ, ದಕ್ಷ, ಪ್ರಾಮಾಣಿಕ ಸೇವೆ ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಶುಭ ಹಾರೈಸಿದರು.
ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಗೆ ಒಟ್ಟಾಗುತ್ತೇವೆ
ಬಿಜೆಪಿಯಲ್ಲಿ ಕೆಲವರು ಒಡಕುಂಟು ಮಾಡುತ್ತಿದ್ದಾರೆಂಬ ಆರೋಪ ನಿಜ. ಈ ಬಗ್ಗೆ ಕೇಂದ್ರ ನಾಯಕರ ಗಮನಕ್ಕೆ ತಂದಿದ್ದು, ಶೀಘ್ರದಲ್ಲಿಯೇ ಎಲ್ಲರೂ ಒಟ್ಟಾಗಿಯೇ ಪಕ್ಷ ಸಂಘಟನೆಗೆ ಬದ್ಧರಾಗಿ ದುಡಿಯುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಇಂದಿಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿಜೆಪಿ `ಮನೆಯೊಂದು ಮೂರು ಬಾಗಿಲು’ ಎನ್ನುವಂತಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಚರ್ಚೆ ಮಾಡೋಣ, ಕೊರತೆ ಇದ್ದರೆ ಸರಿಪಡಿಸಿ ಮುಂದೆ ಸಾಗೋಣ ಹಾಗೂ ಪಕ್ಷ ಬಲವರ್ಧನೆಯತ್ತ ಗಮನಹರಿಸೋಣ ಎಂದು ಶಾಸಕ ಯತ್ನಾಳ್ ಟೀಂಗೆ ಸಲಹೆ ನೀಡಿದರು.
ಕಾಂಗ್ರೆಸ್ನವರು ಜೆಡಿಎಸ್ ಶಾಸಕರನ್ನು ಸೆಳೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ವೈ ಅವರು, ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಒಟ್ಟಾಗಿಯೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ಕುಮಾರಸ್ವಾಮಿ, ದೇವೇಗೌಡರು ಸೇರಿದಂತೆ, ಬಿಜೆಪಿ-ಜೆಡಿಎಸ್ ಮುಖಂಡರು ಒಂದಾಗಿದ್ದೇವೆ. ಪಕ್ಷದಲ್ಲಿ ಅನೇಕ ಮಾಜಿ ಶಾಸಕರಿದ್ದಾರೆ. ಗೆದ್ದು ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುತ್ತೇವೆ. ಸದ್ಯದ ವಾತಾವರಣ ಚನ್ನಾಗಿಯೇ ಇದೆ. ಪಕ್ಷ ಸಂಘಟನೆಗೆ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ನವರ ಯಾವುದೇ ಪೊಳ್ಳು ಭರವಸೆಗೆ ಮರುಳಾಗದೇ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಬ್ರಿಟಿಷರನ್ನು ಓಡಿಸಿದ ಕಾಂಗ್ರೆಸ್ಗೆ ಬಿಜೆಪಿ ಯಾವ ಲೆಕ್ಕ ಎಂಬ ಶಿವರಾಜ್ ತಂಗಡಗಿ ಹೇಳಿಕೆ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಅಂತವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತವರ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಶಕ್ತಿ ಮತ್ತಷ್ಟು ವೃದ್ಧಿಯಾಗಲಿ. ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಹಿತ ನುಡಿದರು.
ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿಸಿದ್ದೇನೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಪ್ರಜ್ವಲವಾಗಲಿ ಎಂದರು.
ಬಿ.ವೈ. ವಿಜಯೇಂದ್ರ ರಾಜ್ಯದ ಮುಂದಿನ ಸಿಎಂ?:ನಾಡು ಕಂಡ ಅಪರೂಪದ, ಧೀಮಂತ ರಾಜಕಾರಣಿ, ರೈತ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿಯನ್ನು ಕಟ್ಟಿ ಬೆಳೆಸಿದವರು. ಬಿಎಸ್ವೈ ರಾಜ್ಯಮಟ್ಟದಲ್ಲಿ `ರಾಜಾಹುಲಿ’ ಆದರೆ ಜಿಲ್ಲೆಯಲ್ಲಿ ರವೀಂದ್ರನಾಥ್ `ರಾಜಾಹುಲಿ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಮುಂದಿನ ಚುನಾವಣೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿಯೇ ನಡೆಯುತ್ತದೆ. ಮುಂದಿನ ಮುಖ್ಯಮಂತ್ರಿ ಕೂಡ ವಿಜಯೇಂದ್ರ ಅವರೇ ಎಂದರು.
ರವೀಂದ್ರನಾಥ್ ಅವರು ಕೃಷಿ, ನೀರಾವರಿ, ಸಕ್ಕರೆ, ತೋಟಗಾರಿಕೆ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಭದ್ರಾ ಸುಭದ್ರವಾಗಿರಲು ಹೋರಾಟ ಮಾಡಿದ ದಿಟ್ಟ ಹೋರಾಟಗಾರ. ಚುನಾವಣಾ ಕಣದಿಂದ ನಿವೃತ್ತಿಯಾಗಿದ್ದಾರೆಯೇ ಹೊರತು, ರಾಜಕೀಯದಿಂದ ಅಲ್ಲ. ಅವರ ಮಾರ್ಗದರ್ಶನ ಮತ್ತು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮತ್ತೆ ಬಿಜೆಪಿಯನ್ನು ಬಲಪಡಿಸಲಾಗುವುದು ಎಂದರು.
ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಗಿರುವುದಕ್ಕೆ ಯಾರೂ ಧೃತಿಗೆಡಬೇಕಾದ ಅಗತ್ಯವಿಲ್ಲ. ಉಪ ಚುನಾವಣೆ ದಿಕ್ಸೂಚಿಯಲ್ಲ. ಹಣ, ತೋಳ್ಬಲದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೆಲವರು ರಾಜ್ಯಾಧ್ಯಕ್ಷ ವಿಜಯೇಂದ್ರ ಸೋಲಿಗೆ ಕಾರಣ ಎನ್ನುತ್ತಾರೆ. ಆದರೆ ಕೆಲವರ ಸ್ವಯಂಕೃತ ಅಪರಾಧದಿಂದ ಸೋಲಾಗಿದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಯಡಿಯೂರಪ್ಪ ಅವರ ಬಳಿ ಉಂಡು, ತಿಂದು, ದುಡ್ಡು ಮಾಡಿಕೊಂಡು ಅವರ ವಿರುದ್ಧ ಆರೋಪ ಮಾಡುತ್ತಿರುವುದನ್ನು ಕಂಡರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಬಿಎಸ್ವೈ ಮತ್ತು ವಿಜಯೇಂದ್ರ ಅವರ ವಿರುದ್ಧ ಆರೋಪ ಮಾಡುವುದು ಸಲ್ಲದು ಎಂದು ತಾಕೀತು ಮಾಡಿದರು.
ಎಸ್ಎಆರ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿಲ್ಲ. ಸೋಲಿಗೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣ. ಇದಕ್ಕೆ ಮತದಾರರಲ್ಲ ಎಂದು ಹೆಸರು ಹೇಳದೇ ಸಿದ್ದೇಶ್ವರ್ ಅವರಿಗೆ ಟಾಂಗ್ ನೀಡಿದರು.
ಹಿಂದೂ ಹುಲಿ ಎಂದು ಸ್ವಯಂಘೋಷಣೆ ಮಾಡಿಕೊಂಡವರಿಗೇನು ಗೊತ್ತು ರಾಜಾಹುಲಿ ಬಿಎಸ್ವೈ ಸಾಮರ್ಥ್ಯ ಎಂದು ಯತ್ನಾಳ್ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು.
ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರವೀಂದ್ರನಾಥ ಸರಳ, ಸಜ್ಜನಿಕೆಯ ವ್ಯಕ್ತಿತ್ವದವರು. ಸಚಿವರಾದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಶ್ರಮಿಸಿದ್ದಾರೆಂದರು.
ರೈತರನ್ನು ಚೀನಾ ಮತ್ತು ಇಸ್ರೇಲ್ ದೇಶಗಳಿಗೆ ಕರೆದೊಯ್ದು ಆಧುನಿಕ ಬೇಸಾಯ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟವರು. ರೈತರ ಪರ ಅತ್ಯಂತ ಕಾಳಜಿ ವಹಿಸಿದ ನಾಯಕರು. ಅದರಂತೆ ದಕ್ಷಿಣ ಭಾರತದಲ್ಲಿಯೇ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಪಕ್ಷ ಕಾಲೆಳೆಯುವವರಿಂದಲೇ ಅಧೋಗತಿಗೆ ಹೋಗುತ್ತಿದೆ ಎಂದು ವಿಷಾದಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಸೇರಿದಂತೆ ಬಿಜೆಪಿ ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಎಂ. ಬಸವರಾಜನಾಯ್ಕ, ಅರುಣ್ ಕುಮಾರ್ ಪೂಜಾರ, ಹೆಚ್.ಪಿ. ರಾಜೇಶ್, ಚಂದ್ರಶೇಖರ್ ಪೂಜಾರ್ ಬಿಎಸ್ವೈ ಮತ್ತು ಎಸ್ಎಆರ್ ಅವರ ರಾಜಕೀಯ ವೈಖರಿ ಕುರಿತು ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಪ್ರೊ.ಲಿಂಗಣ್ಣ, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ್, ಎಲ್.ಎನ್. ಕಲ್ಲೇಶ್, ಧನಂಜಯ ಕಡ್ಲೇಬಾಳು, ವೈ. ಮಲ್ಲೇಶ್, ಜಗದೀಶ ಬಣಕಾರ್, ಮರಿಸ್ವಾಮಿ ಬೆಂಗಳೂರು, ಅಣಬೇರು ರಾಜಣ್ಣ, ಅನಿಲ್ ಕುಮಾರ್, ಐರಣಿ ಅಣ್ಣೇಶ್, ಆಲೂರು ನಿಂಗರಾಜ್, ಬಿ.ಎಂ. ಸತೀಶ್ ಕೊಳೇನಹಳ್ಳಿ, ವೀರೇಂದ್ರ ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.