ದೀಪದಂತೆ ಪ್ರಜ್ವಲಿಸುವ ‘ನಾಮದೇವ ಸಿಂಪಿ’ ಸಮಾಜ

ದೀಪದಂತೆ ಪ್ರಜ್ವಲಿಸುವ ‘ನಾಮದೇವ ಸಿಂಪಿ’ ಸಮಾಜ

ದಾವಣಗೆರೆ, ನ.25-  ನಾಮದೇವ ಸಿಂಪಿ ಸಮಾಜ ಸುಸಂಸ್ಕೃತ ಹಾಗೂ ಸಂಸ್ಕಾರವಂತ ಸಮಾಜವಾಗಿದ್ದು, ಎಲ್ಲಾ ಸಮಾಜಗಳ ಮಧ್ಯೆ ದೀಪದಂತೆ ಪ್ರಜ್ವಲಿಸುತ್ತಿದೆ ಎಂದು ಬಿಜೆಪಿ ಕೈಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕೆ.ಬಿ. ಕೊಟ್ರೇಶ್ ಹೇಳಿದರು.

ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ನಾಮದೇವ ಭಜನಾ ಮಂದಿರದ ಸಭಾಂಗಣದಲ್ಲಿ ನಾಮದೇವ ಸಿಂಪಿ ಸಮಾಜದ ವತಿಯಿಂದ ಇಂದು ಹಮ್ಮಿಕೊಂಡಿದ್ದ  99 ನೇ ಶ್ರೀ ಪಾಂಡುರಂಗ ವಿಠಲ ರುಕ್ಮಿಣಿ ದಿಂಡಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣವೇ ಶಕ್ತಿಯಾಗಿದ್ದು, ಶಿಕ್ಷಣದಿಂದ ಏನೆಲ್ಲಾ ಬದಲಾವಣೆಗಳನ್ನು ತರಲು ಸಾಧ್ಯವಿದೆ. ಇಡೀ ಜಗತ್ತನ್ನೇ ಬದಲಿಸಬಲ್ಲ ಶಕ್ತಿ ಶಿಕ್ಷಣಕ್ಕಿದೆ. ಪ್ರಸ್ತುತ ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕಾದ ಅಗತ್ಯವಿದೆ. ಅವರಿಗೆ ಸರಿಯಾದ ಶಿಕ್ಷಣ ನೀಡುವ ಮೂಲಕ ಸ್ವಾವಲಂಬಿ ಬದುಕಿಗೆ ದಾರಿ ಮಾಡಿ ಕೊಡಬೇಕಾಗಿದೆ ಎಂದರು.

ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಮಾಜದ ಗಣ್ಯರನ್ನು ಗೌರವಿಸುವ ಕಾರ್ಯ ಶ್ಲ್ಯಾಘನೀಯವಾದುದು. ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ, ಜೀವನದಲ್ಲಿ ಸಾಧಕರಾಗಿ ಸಮಾಜಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು.

ನಾಮದೇವ ಸಿಂಪಿ ಸಮಾಜದ ದೈವ ಮಂಡಳಿ ಅಧ್ಯಕ್ಷರೂ, ಮಾಜಿ  ಮಹಾಪೌರರೂ ಆದ ಎಂ.ಎಸ್. ವಿಠಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಮದೇವ ಸಿಂಪಿ ಸಮಾಜ ಉತ್ಕೃಷ್ಟ ಸಮಾಜವಾಗಿದ್ದು, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಉತ್ತೇಜಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ನಾಮದೇವ ಸಿಂಪಿ ಸಮಾಜದಲ್ಲಿ ಅನೇಕ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ ಪಡೆದು, ಉನ್ನತ ಹುದ್ದೆಗಳಲ್ಲಿ ಇದ್ದಾರೆ. ಇದೀಗ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ತಮಗಿಂತ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ನೆರವು ನೀಡುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕೆಂದು ಹಿತ ನುಡಿದರು.

ನಾಮದೇವ ಸಿಂಪಿ ಸಮಾಜದ ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಬಸವರಾಜ್ ಹನುಮಲಿ ಉಪನ್ಯಾಸ ನೀಡಿದರು. 

ಸಮಾಜದ ಮುಖಂಡರಾದ ಮಂಜುನಾಥ ಪಿಸೆ, ರಾಘವೇಂದ್ರ, ಮನೋಹರ ಬೊಂಗಾಳೆ, ವಿಠಲ್ ರಾಖುಂಡೆ, ಶಿವಶಂಕರ್, ರೇಣುಕಾಬಾಯಿ ಪಿಸೆ, ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!