ಹರಪನಹಳ್ಳಿ,ನ.25- ಪಟ್ಟಣದ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 25ನೇ ವಾರ್ಡಿನ ಸದಸ್ಯ ವಕೀಲ ಟಿ.ವೆಂಕಟೇಶ್ ಮತ್ತು ಸದಸ್ಯರಾಗಿ ಅಬ್ದುಲ್ ರೆಹಮಾನ್, ಗೊಂಗಡಿ ನಾಗರಾಜ, ಉದ್ದಾರ ಗಣೇಶ್, ತಾರಾ ಹನುಮಂತಪ್ಪ, ಲಾಟಿ ದಾದಾಪೀರ್, ಜಾಕೀರ್ ಹುಸೇನ್ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಭಿನಂದಿಸಿ ಅವರು ಮಾತನಾಡಿದರು.
ಈ ಹಿಂದೆ ಪುರಸಭೆ ಅಧ್ಯಕ್ಷರ ಮೀಸಲಾತಿ ವಿಚಾರದಲ್ಲಿ ಸದಸ್ಯರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದ ಸಂದರ್ಭದಲ್ಲಿ ಶಾಸಕರು ಮತ್ತು ನಮ್ಮ ಬಗ್ಗೆ ಪಕ್ಷದಲ್ಲಿನ ಕೆಲ ಮೀರ್ ಸಾಧಕರು ಟೀಕೆ ಮಾಡಿ ರಾಜಿನಾಮೆಗೆ ಒತ್ತಾಯಿಸಿದ್ದರು ಎಂದರು.
ರಾಜಕೀಯ ಮೀಸಲಾತಿ ಕೇಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹಕ್ಕು ಇದೆ. ನಾವು ಅದನ್ನು ಪ್ರಶ್ನೆ ಮಾಡುವುದಕ್ಕೆ ಆಗಲ್ಲ ಎಂದ ಅವರು, ಕೋರ್ಟ್ ಮೊರೆ ಹೋಗಿದ್ದ ಸದಸ್ಯರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕೇಸ್ ವಾಪಸ್ ಪಡೆದಿದ್ದರಿಂದ ತಡೆಯಾಜ್ಞೆ ತೆರವು ಗೊಂಡಿತು. ಆಗ ಶಾಸಕರ ಮಾರ್ಗದರ್ಶನದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಡಲಾಯಿತು ಎಂದರು.
ಈ ಹಿಂದೆ ಎಂ.ಪಿ.ರವೀಂದ್ರ ಅವರು ಪುರಸಭೆಗೆ ವಿಶೇಷ ಅನುದಾನ ನೀಡಿದ್ದು ಬಿಟ್ಟರೆ, ಬೇರೆ ಯಾವ ಶಾಸಕರು ಈವರೆಗೆ ಯಾವುದೇ ವಿಶೇಷ ಅನುದಾನ ನೀಡಿಲ್ಲ. ಹಾಗಾಗಿ ಲತಾ ಮಲ್ಲಿಕಾರ್ಜುನ್ ಅವರು ಪುರಸಭೆಗೆ ವಿಶೇಷ ಅನುದಾನ ತಂದು ಪಟ್ಟಣವನ್ನು ಹೆಚ್ಚೆಚ್ಚು ಅಭಿವೃದ್ದಿಗೊಳಿಸಬೇಕೆಂದು ಮನವಿ ಮಾಡಿದರು.
ಈಗಾಗಲೇ ಪಟ್ಟಣಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತಕ್ಕೆ ಬಂದಿರುವುದರಿಂದ ಶಾಸಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸ ಬೇಕೆಂದು ಕೋರಿದರು.
ಪುರಸಭೆ ಸದಸ್ಯರಾದ ಅಬ್ದುಲ್ ರೆಹಮಾನ್, ಎಚ್.ಎಂ.ಅಶೋಕ ಮಾತನಾಡಿದರು. ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಪುರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಅಭಿನಂದಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಎಂ.ಪಾತೀಮಾಬೀ ಶೇಕ್ಷಾವಲಿ, ಉಪಾಧ್ಯಕ್ಷ ಎಚ್.ಕೊಟ್ರೇಶ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.