ದಾವಣಗೆರೆ, ನ.25- ರಾಜ್ಯ ಸರ್ಕಾರ ನಮ್ಮ ಕ್ಷೇತ್ರಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಅನುದಾನ ನೀಡುತ್ತಿದ್ದು, ಈ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ ಕರ್ತವ್ಯ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ಸೋಮವಾರ ಮಹಾನಗರ ಪಾಲಿಕೆ ವತಿ ಯಿಂದ ವಿವಿಧ ಯೋಜನೆಗಳಡಿಯಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸದೇ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.
ಮೇಯರ್ ಕೆ.ಚಮನ್ಸಾಬ್ ಮಾತನಾಡಿ, ದಾವಣಗೆರೆಗೆ ಶಾಮನೂರು ಕುಟುಂಬದ ಕೊಡುಗೆ ಸಾಕಷ್ಟಿದ್ದು, ಅವರ ಅಭಿವೃದ್ಧಿ ಚಿಂತನೆ ಇತರರಿಗೆ ಮಾದರಿ. ಸ್ವತಃ ಮುಖ್ಯಮಂತ್ರಿಗಳೇ ದಾವಣಗೆರೆ ಅಭಿವೃದ್ಧಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಆಯುಕ್ತರಾದ ರೇಣುಕಾ ಮಾತನಾಡಿ, ನಗರದ ವಿವಿಧ ಕಡೆಗಳಲ್ಲಿ ಇ-ಸ್ವತ್ತು ಮಾಡಲು ಕೆಲವು ಗೊಂದಲ ಇದ್ದು, ಅವುಗಳನ್ನು ಬಗೆಹರಿ ಸುವಂತೆ ಸಂಸದರು, ಸಚಿವರು, ಶಾಸಕರು ಸೂಚನೆ ನೀಡಿದ್ದು, ನಾಗರಿಕರು ತಮ್ಮ ದಾಖಲೆ ಗಳನ್ನು ಸರಿಪಡಿಸಿಕೊಳ್ಳುವಂತೆ ಕರೆ ನೀಡಿದರು.
ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಶ್ರೀಮತಿ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಆಶಾ ಉಮೇಶ್, ಸದಸ್ಯರುಗಳಾದ ಶ್ರೀಮತಿ ನೂರ್ ಜಹಾನ್ ಬೀ, ಜಾಕೀರ್ ಅಲಿ, ಜಿ.ಡಿ.ಪ್ರಕಾಶ್, ಕಬೀರ್ ಅಲಿ, ದಾದಾಪೀರ್ (ಅಯ್ಯಪ್ಪ ದಾದು) ಶಫೀಕ್ ಪಂಡಿತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.