ದಾವಣಗೆರೆ, ನ. 25- ಜನರ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಗ್ಯಾರಂಟಿ ಯೋಜನೆ ಯನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಹೇಳಿದರು.
ನಗರದ ಸರ್ಕಾರಿ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯುವನಿಧಿ ಯೋಜನೆಯ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಡಿಪ್ಲೋಮಾ, ಪದವಿ ಪೂರೈಸಿಕೊಂಡು ಉದ್ಯೋಗ ಸಿಗುವವರೆಗೆ ವಿವಿಧ ಸಂದರ್ಶನಗಳಿಗೆ ಹಾಜರಾಗಲು ಯುವನಿಧಿಯಿಂದ ಸಹಕಾರಿಯಾಗಲಿದೆ, ಇದರಿಂದ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ನಂಜಾನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಕುರಿತು ಮೊದಲು ನಾನು ಇದೇ ಕಾಲೇಜಿನಲ್ಲಿ ಸುಮಾರು ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದೇನೆ. ಇಲ್ಲಿ ಬರುವ ಹಲವಾರು ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಹಣಕಾಸಿನ ಅವಶ್ಯಕತೆ ತುಂಬಾ ಮುಖ್ಯ, ಹಾಗಾಗಿ ಈ ಯೋಜನೆಯನ್ನು ಎಲ್ಲರೂ ಸಮರ್ಪಕವಾಗಿ ಬಳಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ. ಬಸವರಾಜ್ ತಹಶೀಲ್ದಾರ್ ಮಾತನಾಡಿದರು.
ಜಿಲ್ಲಾ ಉದ್ಯೋಗಾಧಿಕಾರಿ ಡಿ. ರವೀಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರುಗಳಾದ ಎಸ್.ಎಸ್. ಗಿರೀಶ್, ಹೆಚ್.ಜೆ. ಮೈನುದ್ದಿನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರುಗಳಾದ ವೆಂಕಟೇಶ ಬಾಬು ಮತ್ತು ರಾಜ್ ಮೋಹನ್ ಎನ್.ಆರ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಎಸ್. ಮಲ್ಲಿಕಾರ್ಜುನ,
ಬಿ.ಎನ್. ಧನಂಜಯ ಉಪಸ್ಥಿತರಿದ್ದರು.